ಜಯದೇವದಲ್ಲಿ ವೈದ್ಯರು, ಸಿಬ್ಬಂದಿಯಿಂದ ಉತ್ತಮ ಸೇವೆ: ಡಾ. ಸಿ.ಎನ್. ಮಂಜುನಾಥ್ ಮೆಚ್ಚುಗೆ

39
Published on

ಮೈಸೂರು: ಜಯದೇವ ಹೃದ್ರೋಗ ಆಸ್ಪತ್ರೆ ಏಷ್ಯಾದಲ್ಲಿಯೇ ಅತ್ಯಂತ ದೊಡ್ಡ ಆಸ್ಪತ್ರೆಯಾಗಿದ್ದು, 18 ಕ್ಯಾತ್ ಲ್ಯಾಬ್‌ಗಳನ್ನು ಹೊಂದಿದೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್ ತಿಳಿಸಿದರು.
ನಗರದ ಜಯದೇವ ಹೃದ್ರೋಗ ಆಸ್ಪತ್ರೆಗೆ ಗುರುವಾರ ಭೇಟಿ ವಿವಿಧ ವಿಭಾಗ ಪರಿಶೀಲಿಸಿದ್ದಲ್ಲದೆ, ರೋಗಿಗಳ ಯೋಗಕ್ಷೇಮ ವಿಚಾರಿಸಿ ಅವರು ಮಾತನಾಡಿದರು.
ಬೆಂಗಳೂರು, ಮೈಸೂರು, ಕಲಬುರಗಿಯಲ್ಲಿ 1600 ಬೆಡ್‌ಗಳ ಸಾರ್ಮಥ್ಯವಿರುವ ಜಯದೇವ ಆಸ್ಪತ್ರೆ ಪ್ರತಿನಿತ್ಯ ಸಾವಿರಾರು ಜನರಿಗೆ ಚಿಕಿತ್ಸೆ ನೀಡುತ್ತಿದೆ. ಮೈಸೂರಿನಲ್ಲಿ ಪ್ರತಿನಿತ್ಯ 700 ಜನ ಹೊರರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಇಸಿಜಿ 8 ಲಕ್ಷದ 89 ಸಾವಿರ ಜನರಿಗೆ ಮಾಡಿದ್ದೇವೆ. ಎಕೋ 5 ಲಕ್ಷದ 83 ಸಾವಿರ ಜನರಿಗೆ ಆಗಿದೆ. ಆಂಜಿಯೋಪ್ಲಾಸ್ಟಿ 31,265 ಜನರಿಗೆ ಆಗಿದೆ. ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನು 2,141 ಜನರಿಗೆ ಮಾಡಿದ್ದೇವೆ ಎಂದು ವಿವರಿಸಿದರು.
ಮೈಸೂರಿನ ಈ ಆಸ್ಪತ್ರೆಯಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ ಭಾಗದ ಜನರಿಗೆ ಅನುಕೂಲವಾಗಿದ್ದು, ಹಣ ಇರಲಿ, ಇಲ್ಲದಿರಲಿ ಮೊದಲು ಮಾನವೀಯತೆಗೆ ಆದ್ಯತೆ ನೀಡಿ ಚಿಕಿತ್ಸೆ ನೀಡುತ್ತೇವೆ. ಆಸ್ಪತ್ರೆಯ ಸಿಬ್ಬಂದಿ, ರೋಗಿ ಬಂದ ತಕ್ಷಣ ಚಿಕಿತ್ಸೆ ನೀಡಬೇಕು. ನಂತರ ದಾಖಲಾತಿ ಕೇಳಬೇಕು. ವೈದ್ಯರು ಮತ್ತು ಸಿಬ್ಬಂದಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ ಎಂದರು.
ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಎಲ್.ಜಗದೀಶ, ವೈದ್ಯರಾದ ಡಾ.ಹರ್ಷಬಸಪ್ಪ, ಡಾ.ಸಂತೋಷ, ಡಾ.ಶ್ರೀನಿಧಿ ಹೆಗ್ಗಡೆ, ಡಾ.ಶಂಕರ್ ಶಿರಾ, ಡಾ. ದೇವರಾಜ್, ನರ್ಸಿಂಗ್ ಅಧೀಕ್ಷಕ ಹರೀಶ್‌ಕುಮಾರ್ ಪಿ.ಆರ್‌ಒಗಳಾದ ವಾಣಿ, ಚಂಪಕಮಾಲಾ, ಶಂಕರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net