ಬದುಕಿನ ಸಂಘರ್ಷ ಎದುರಿಸುವ ಕಲೆ ಕರಗತ : ಶಾಸಕ ಉಮಾನಾಥ ಎ.ಕೋಟ್ಯಾನ್ ಚಿಂತನೆ

New Project (7)
Published on

ಮೂಡುಬಿದಿರೆ: ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರವನ್ನು ಮೂಡುಮಾರ್ನಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಉದ್ಘಾಟಿಸಲಾಯಿತು.

ಶಾಸಕ ಉಮಾನಾಥ ಎ.ಕೋಟ್ಯಾನ್ ಶಿಬಿರ ಉದ್ಘಾಟಿಸಿ, ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಗೆ ಪಠ್ಯದ ಜತೆ ಪಠ್ಯೇತರ ವಿಷಯಗಳೊಂದಿಗೆ ಸ್ವಾವಲಂಬಿ ಬದುಕು ಕಲಿಸಿಕೊಡುತ್ತದೆ. ಶಿಬಿರವು ಕುಟುಂಬ ಪ್ರಜ್ಞೆ, ರಾಷ್ಟ್ರೀಯ ಚಿಂತನೆ ಮತ್ತು ಬದುಕಿನಲ್ಲಿ ಎದುರಾಗುವ ಸಂಘರ್ಷ ಎದುರಿಸುವ ಕಲೆ ತಿಳಿಸಿಕೊಡುತ್ತದೆ ಎಂದರು.

ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ ಜೈನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ಮತ್ತು ಮುಂದುಗಳ ನಡುವಿನ ಕೊಂಡಿಯೇ ವರ್ತಮಾನ. ಕಾಲ ಮುಂದುವರಿಯುವುದೇ ಆ ಕಿಂಡಿಯ ಮೂಲಕ. ಬದುಕಿನ ಸಂಕೀರ್ಣತೆ ಮತ್ತು ಸವಾಲುಗಳು ನಮ್ಮನ್ನು ಗಟ್ಟಿ ಮಾಡುತ್ತವೆ. ಕಷ್ಟ ಮಳೆಯಂತೆ ಸುರಿಯುವಾಗ ಅದನ್ನು ನಗುತ್ತಾ ಸ್ವೀಕರಿಸಲು ಈ ಶಿಬಿರಗಳು ನಮಗೆ ಜೀವನ ಪಾಠ ಒದಗಿಸಿಕೊಡುತ್ತವೆ ಎಂದರು.

ಪಡುಮಾರ್ನಾಡು ಗ್ರಾಪಂ ಅಧ್ಯಕ್ಷ ವಾಸುದೇವ ಭಟ್, ಉಪಾಧ್ಯಕ್ಷೆ ಸಂಪಾ, ಮೂಡುಮಾರ್ನಾಡು ಶಾಲೆ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಭಾಷ್ ಚಂದ್ರ ಚೌಟ, ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಮನೋಜ್ ಕುಮಾರ್, ಶಾಲೆಯ ಮುಖ್ಯಶಿಕ್ಷಕಿ ಜ್ಯೋತಿ ಡಿಸೋಜ, ಶಾಲೆಯ ವಿದ್ಯಾರ್ಥಿ ನಾಯಕಿ ಆತ್ಮೀ ಉಪಸ್ಥಿತರಿದ್ದರು. ಶಿಬಿರಾಧಿಕಾರಿ ತೇಜಸ್ವಿ ಭಟ್ ಸ್ವಾಗತಿಸಿದರು. ಉಪನ್ಯಾಸಕ ಡಾ.ವಾದಿರಾಜ ಕಲ್ಲೂರಾಯ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net