ಸಾಂಸ್ಕೃತಿಕ, ಧಾರ್ಮಿಕ ಪರಂಪರೆಗಳಿಂದ ಶ್ರೇಷ್ಠತೆ

h31-ganesh award
Published on

ಹುಬ್ಬಳ್ಳಿ: ಗಣೇಶೋತ್ಸವ ರೀತಿಯ ಸಾಂಸ್ಕೃತಿಕ- ಧಾರ್ಮಿಕ ಪರಂಪರೆಗಳು ಮನುಷ್ಯನ ವ್ಯಕ್ತಿತ್ವಕ್ಕೆ ಶ್ರೇಷ್ಠತೆ ತಂದುಕೊಡುತ್ತವೆ. ಕಲೆ, ಸಾಹಿತ್ಯ, ಸಂಸ್ಕೃತಿ, ಕ್ರೀಡೆ ಚಟುವಟಿಕೆಗಳು ಮಾನವ ಜನಾಂಗದ ಶ್ರೇಷ್ಠತೆಯನ್ನು ಸಾರುತ್ತವೆ ಎಂದು ಮೂರುಸಾವಿರ ಮಠದ ಶ್ರೀ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು.

ಹುಬ್ಬಳ್ಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಗಳ ಮಹಾಮಂಡಳ ವತಿಯಿಂದ ಇಲ್ಲಿಯ ಮೂರುಸಾವಿರ ಮಠದ ಮೂಜಗಂ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ವಿವಿಧ ಗಣೇಶೋತ್ಸವ ಸಮಿತಿಗಳಿಗೆ ನೀಡಲಾಗುವ ಬಹುಮಾನ ವಿತರಣಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಭಾರತದಲ್ಲಿ ಹಿಂದುಗಳು ಅಸಂಖ್ಯಾತ ಹಬ್ಬಗಳನ್ನು ಅದ್ಭುತವಾಗಿ ವಿಭಿನ್ನ ರೀತಿಯಲ್ಲಿ ಆಚರಿಸುತ್ತಾರೆ. ಬೇರಾವ ದೇಶ- ಧರ್ಮದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಹಬ್ಬಗಳ ಆಚರಣೆ ಇಲ್ಲ. ಹಬ್ಬಕ್ಕೆ ತಯಾರಿಸುವ ಆಹಾರ ಪದಾರ್ಥಗಳು ಕೂಡ ವೈವಿಧ್ಯಮಯ, ಸ್ವಾದಿಷ್ಟವಾಗಿರುತ್ತವೆ ಎಂದರು.

ಉದ್ಯಮಿ ಡಾ.ವಿ.ಎಸ್.ವಿ. ಪ್ರಸಾದ ಮಾತನಾಡಿ, ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದ ಗಣೇಶೋತ್ಸವ ಮಂಡಳಿಯು ಇಡೀ ದೇಶಕ್ಕೆ ಮಾದರಿಯಾಗುವಂತೆ ಗಣೇಶ ವಿಗ್ರಹದ ವಿಸರ್ಜನೆ ಸಮಾರಂಭವನ್ನು ಈ ಬಾರಿ ನೆರವೇರಿಸಿದೆ ಎಂದರು.

ಛೋಟಾ ಮುಂಬೈ ಎಂದೇ ಹೆಸರುವಾಸಿಯಾದ ಹುಬ್ಬಳ್ಳಿಯಲ್ಲಿ ಮುಂಬೈಗೆ ಪೈಪೋಟಿ ನೀಡುವ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಆಚರಿಸಲಾಗುತ್ತಿದೆ. ಇಡೀ ಉತ್ತರ ಕರ್ನಾಟಕದ ಜನರು ಹುಬ್ಬಳ್ಳಿ ಗಣೇಶ ವಿಗ್ರಹಗಳ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ ಎಂದವರು ಹರ್ಷ ವ್ಯಕ್ತಪಡಿಸಿದರು.

ಉದ್ಯಮಿ ವೀರೇಶ ಉಂಡಿ ಮಾತನಾಡಿ, ರಾಜ್ಯಕ್ಕೆ ಮಾದರಿ ಎನ್ನುವಂತೆ ಸಾರ್ವಜನಿಕ ಗಣೇಶೋತ್ಸವನ್ನು ಭಕ್ತರ ವಂತಿಗೆಯಿಂದಲೇ ಆಚರಿಸಿಕೊಂಡು ಬರಲಾಗುತ್ತಿದೆ. ಹುಬ್ಬಳ್ಳಿಯ ಈ ಮಹಾ ಉತ್ಸವಕ್ಕೆ ರಾಜ್ಯ ಸರ್ಕಾರವು ಅನುದಾನ ನೀಡುವ ಮೂಲಕ ಇನ್ನಷ್ಟು ಪ್ರೋತ್ಸಾಹ ನೀಡಬೇಕು ಎಂದು ಆಗ್ರಹಿಸಿದರು.

ಮಹಾಮಂಡಳದ ಅಧ್ಯಕ್ಷ ಮೋಹನ ಲಿಂಬಿಕಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾಮಂಡಳದ ಉಪಾಧ್ಯಕ್ಷರಾದ ಅಲ್ತಾಫ್ ಕಿತ್ತೂರ, ಶಾಂತರಾಜ ಪೋಳ, ಗೌರವ ಕಾರ್ಯದರ್ಶಿ ಎಸ್.ಎಸ್. ಕಮಡೊಳ್ಳಿಶೆಟ್ಟರ್, ಮಹಿಳಾ ವಿಭಾಗದ ಅಧ್ಯಕ್ಷೆ ಸಂಗೀತಾ ಇಜಾರದ ವೇದಿಕೆ ಮೇಲೆ ಉಪಸ್ಥಿತರಿದ್ದರು.

ಅನಿಲ ಕವಿಶೆಟ್ಟಿ ಸ್ವಾಗತಿಸಿದರು. ಸಂತೋಷ ಶೆಟ್ಟಿ, ಅನಿತಾ ಜಡಿ ಪ್ರಾರ್ಥಿಸಿದರು. ಮಂಡಳದ ಗೌರವದ ಕಾರ್ಯದರ್ಶಿ ಅಮರೇಶ ಹಿಪ್ಪರಗಿ ವಂದಿಸಿದರು. ಸವಿತಾ ಚಂದನಮಟ್ಟಿ, ಗಾಯಿತ್ರಿ ನೆಲ್ಲಿಕೊಪ್ಪ, ಶೋಭಾ ಕಂಪ್ಲಿ, ಶ್ರೀನಿಧಿ ದೇಶಪಾಂಡೆ ನಿರೂಪಿಸಿದರು.

ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಡಾ. ರಮೇಶ ಮಹಾದೇವಪ್ಪನವರ, ಕೀರ್ತಿ ಲಿಂಗರಾಜ ಕುಂದಗೋಳ, ಈರಣ್ಣ ನಾಯ್ಕರ, ನಾಗೇಂದ್ರಸಾ ಮಹಾದೇವಸಾ ಮೆಹರವಾಡೆ, ಗೌರಿ ಚಂದ್ರಶೇಖರ ನಾಯಕ, ಸೌರಭ ಕಮ್ಮಾರ, ಡಾ. ಗಂಗಾಧರಯ್ಯ ಚಂದ್ರಶೇಖರ ಹಿರೇಮಠ, ರಾಘವೇಂದ್ರ ವದ್ದಿ, ಡಾ. ನಾಗಲಿಂಗ ಮುರಗಿ, ಫಿಜಾಅಂಜುಮ್ ಬುಕ್ಕಿಟಗಾರ ಅವರನ್ನು ಸನ್ಮಾನಿಸಲಾಯಿತು. ಇದೇ ವೇಳೆ ತೀರ್ಪುಗಾರರಾಗಿ ಆಗಮಿಸಿದ್ದ ಕಲಾವಿದರಾದ ಬಸವರಾಜ ಸಜ್ಜನ, ಈರಣ್ಣ ಪಾಳೇದ, ಅಶೋಕ ಬೆಳ್ಳಿಗಟ್ಟಿ, ವಿಶ್ವನಾಥ ಹಿತ್ತಾಳೆ, ಹರೀಶ ಭರಾಡೆ, ಚಂದ್ರಶೇಖರ ಗಾಣಿಗೇರ, ಸಂತೋಷ ಕಟ್ಟಿ, ಮೋಹನ ಪತ್ತಾರ, ಮೌನೇಶ ಅರ್ಕಸಾಲಿ, ಜಯಾ ಮುರಗೋಡ, ಚಿದಾನಂದ ಪೂಜಾರ, ರಾಜಶೇಖರ ಕರಕಣ್ಣವರ, ಅನಿಲ ಬೇವಿನಕಟ್ಟಿ, ಸಂತೋಷ ಕಾಟವೆ ಅವರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net