ಪರೀಕ್ಷೆಗಳು ವಿಜಯದ ಮೆಟ್ಟಿಲು

29 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ವಿಜಯದ ಮೆಟ್ಟಿಲುಗಳು, ಪರೀಕ್ಷೆಗಳ ಬಗ್ಗೆ ವಿನಾಕಾರಣ ಭಯ ಪಡದೆ ಸಂಭ್ರಮದಿಂದ ಆನಂದಿಸಬೇಕು ಎಂದು ಡಾ. ಆನಂದ ಪಾಂಡುರಂಗಿ ಹೇಳಿದರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ಶಿಕ್ಷಣ ಮಂಟಪವು ಕರ್ನಾಟಕ ಪ್ರೌಢ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಏಕಾಗ್ರತೆಯ ಅಧ್ಯಯನ ಮಾಡುವುದು ಹೇಗೆ? ಕುರಿತು ಉಪನ್ಯಾಸ ನೀಡಿದರು.

ಪರೀಕ್ಷೆಯನ್ನು ಲಘುವಾಗಿ ಪರಿಗಣಿಸದೆ, ಪ್ರಾಮಾಣಿಕತೆ, ನಿದಿರ್ಷ್ಟಗುರಿ, ಸಮಯ ಪರಿಪಾಲನೆಯೊಂದಿಗೆ ಅಧ್ಯಯನ ಮಾಡಬೇಕು. ಸಮಯವು ಹಣಕ್ಕಿಂತಲೂ ಬೆಲೆಯುಳ್ಳದ್ದು. ಮನಸ್ಸು ಗೊಂದಲವಿದ್ದಾಗ ಓದಬಾರದು. ಹೆಚ್ಚು ಅಂಕಗಳಿಸುತ್ತೇನೆ ಎಂಬ ದೃಢ ಸಂಕಲ್ಪ, ಆತ್ಮವಿಶ್ವಾಸದಲ್ಲಿ ಪರೀಕ್ಷೆ ಎದುರಿಸಬೇಕು ಎಂದರು.

ಡಿಮ್ಹಾನ್ಸ್​ನ ಪ್ರಶಾಂತ ಪಾಟೀಲ ಉಪನ್ಯಾಸ ನೀಡಿ, ಚಂಚಲ ಚಿತ್ತವಾದ ಮನಸ್ಸನ್ನು ಒಮ್ಮುಖಗೊಳಿಸಿ ಓದಬೇಕು. ನಿಮ್ಮದೇ ಆದ ಯೋಜನೆ ಮುಖ್ಯ. ಓದುವುದನ್ನು ಬಿಟ್ಟು ವಿನಾಕಾರಣ ವಿಷಯಗಳ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಏಕಾಗ್ರತೆಗೆ ಭಂಗ ತರುವ ಸನ್ನಿವೇಶಗಳನ್ನು ತಿರಸ್ಕರಿಸಿರಿ. ಪುನರಾವರ್ತನೆ, ಗುಂಪು ಅಧ್ಯಯನದಿಂದ ವಿಷಯದ ಮನನವಾಗುತ್ತದೆ ಎಂದರು.

ಶ್ರೀಧರ ಉದಗಟ್ಟಿ ಮಾತನಾಡಿದರು. ಕೆ.ಇ. ಬೋರ್ಡ ಕಾರ್ಯದರ್ಶಿ ಡಿ.ಎಸ್​. ರಾಜಪುರೋಹಿತ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಸಂವಾದ ನಡೆಸಲಾಯಿತು.

ಎನ್​.ಎನ್​. ಸವಣೂರ ಸ್ವಾಗತಿಸಿದರು. ವೀರಣ್ಣ ಒಡ್ಡೀನ ಪ್ರಾಸ್ತಾವಿಕವಾಗಿ ಮಾತನಾಡಿದರು. ಶೋಭಾದೇವಿ ನಿರೂಪಿಸಿದರು. ಪದ್ಮಾವತಿ ಅಂಗಡಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net