ಪರೀಕ್ಷೆ ಅಕ್ರಮ: ತಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

3 vikram 8
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಪಂಚಾಯತ್​ ಅಭಿವೃದ್ಧಿ ಅಧಿಕಾರಿ (ಪಿಡಿಒ) ಪರೀಕ್ಷೆ ಅಕ್ರಮ ಹಾಗೂ 12 ಅಭ್ಯರ್ಥಿಗಳ ಮೇಲೆ ಎಫ್​ಐಆರ್​ ದಾಖಲಿಸಿದ ಕೆಪಿಎಸ್​ಸಿ ಕ್ರಮ ಖಂಡಿಸಿ ಸಾವಿರಾರು ವಿದ್ಯಾರ್ಥಿಗಳು ನಗರದಲ್ಲಿ ಬೃಹತ್​ ಪ್ರತಿಭಟನೆ ನಡೆಸಿದರು.

ಇಲ್ಲಿನ ಕಡಪಾ ಮೈದಾನದಿಂದ ಮೆರವಣಿಗೆ ಆರಂಭಿಸಿ ಜುಬಿಲಿ ವೃತ್ತ ಬಳಿ ಕೆಲ ಹೊತ್ತು ರಸ್ತೆ ತಡೆ ನಡೆಸಿದ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ಸರ್ಕಾರ, ಕರ್ನಾಟಕ ಲೋಕ ಸೇವಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

12 ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಫ್ಐಆರ್​ ರದ್ದುಗೊಳಿಸಬೇಕು. ಕರ್ನಾಟಕ ಲೋಕ ಸೇವಾ ಆಯೋಗ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವುದು ಅಕ್ಷಮ್ಯ ಅಪರಾಧ. ಈ ಅಕ್ರಮಕ್ಕೆ ಕಾರಣರಾದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

ಪಿಡಿಒ ಪರೀಕ್ಷೆ ಅಕ್ರಮ ಖಂಡಿಸಿ ರಾಯಚೂರಲ್ಲಿ ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಕೆಪಿಎಸ್​ಸಿ ದುರುದ್ದೇಶ ಪೂರಕವಾಗಿ 12 ಜನರ ವಿರುದ್ಧ ಎಫ್ಐಆರ್​ ದಾಖಲಿಸಿದೆ ಎಂದು ಆರೋಪಿಸಿದ ಪ್ರತಿಭಟನಾಕಾರರು, ತಕ್ಷಣವೇ ಎಫ್ಐಆರ್​ ​ರದ್ದುಗೊಳಿಸಿ ಆರೋಪಿಗಳಿಗೆ ಶಿಕ್ಷೆ ವಿಧಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್​ ಆಯುಕ್ತರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ವಿವಿಧ ಸಂಸ್ಥೆ ವಿದ್ಯಾರ್ಥಿಗಳು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net