

ಹಾಸನ: ಮಾರಕ ಕರೊನಾ ಭೀತಿ ನಡುವೆ ಸುಗಮವಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಪರೀಕ್ಷೆಗೆ ಗೈರಾದ ವಿದ್ಯಾರ್ಥಿಗಳ ಪೂರಕ ಪರೀಕ್ಷೆಗೆ ಅಣಿಯಾಗಿಸುವ ಕಾರ್ಯದಲ್ಲಿ ನಿರತವಾಗಿದೆ.
ಜೂ.25 ರಿಂದ ಜು.3ರ ವರೆಗೆ ನಡೆದ ಪರೀಕ್ಷೆ ಸುಖಾಂತ್ಯ ಕಂಡಿದ್ದು, ನೋಂದಣಿ ಮಾಡಿಕೊಂಡಿದ್ದ 21,257 ವಿದ್ಯಾರ್ಥಿಗಳ ಪೈಕಿ 60 ವಿದ್ಯಾರ್ಥಿಗಳು ಎಲ್ಲ ಪರೀಕ್ಷೆಯಿಂದ ದೂರ ಉಳಿದಿದ್ದಾರೆ. 591 ಮಕ್ಕಳಿಗೆ ಹಾಜರಾತಿ ಕಡಿಮೆ ಇದ್ದ ಕಾರಣ ಪರೀಕ್ಷೆಗೆ ಪ್ರವೇಶ ಕಲ್ಪಿಸಿರಲಿಲ್ಲ. ನೋಂದಣಿ ಮಾಡಿಕೊಂಡಿದ್ದ 900 ಖಾಸಗಿ ಪರೀಕ್ಷಾರ್ಥಿಗಳ ಪೈಕಿ 135 ಜನರು ಗೈರು ಹಾಜರಾಗಿದ್ದರು. ಹಾಜರಾತಿ ಕೊರತೆಯ ಹಾಗೂ ಖಾಸಗಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಪರೀಕ್ಷೆಯಿಂದ ದೂರ ಉಳಿದ 60 ಮಕ್ಕಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಸಂಪರ್ಕಿಸಿದ್ದು, ಮುಂದಿನ ಪರೀಕ್ಷೆಗೆ ಸಿದ್ಧಗೊಳಿಸುತ್ತಿದ್ದಾರೆ.
2019ರ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮೆರೆದಿದ್ದ ಹಾಸನ ಜಿಲ್ಲಾಡಳಿತ ಈ ವರ್ಷವೂ ಅದೇ ಹುಮ್ಮಸ್ಸಿನಲ್ಲಿ ಕಾರ್ಯ ಯೋಜನೆ ರೂಪಿಸಿತ್ತು. 50 ಅಂಶಗಳ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಸಿದ್ಧಪಡಿಸಿತ್ತು. ಆದರೆ ಹಾಜರಾತಿ ಕಡಿಮೆ ಕಾರಣದಿಂದ 591 ಮಕ್ಕಳನ್ನು ಪರೀಕ್ಷೆಯಿಂದ ದೂರ ಇಡಬೇಕಾಯಿತು. ಆ ವಿದ್ಯಾರ್ಥಿಗಳು ಪೂರಕ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ. ಇನ್ನು ನಿಯಮಿತವಾಗಿ ಶಾಲೆಗೆ ಬಂದು ಪರೀಕ್ಷೆಗೆ ಬಾರದ 60 ವಿದ್ಯಾರ್ಥಿಗಳನ್ನು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
ಗೈರಿಗೆ ಕರೊನಾ ಭೀತಿಯೆ ಕಾರಣ: ಅನಾರೋಗ್ಯ ಹಾಗೂ ಕರೊನಾ ಭೀತಿಯೇ ಗೈರಾಗಲು ಕಾರಣ ಎನ್ನುವ ಅಂಶ ತಿಳಿದು ಬಂದಿದೆ. ಹೊಳೆನರಸೀಪುರದ ವಿದ್ಯಾರ್ಥಿನಿಯೊಬ್ಬರಿಗೆ ಪರೀಕ್ಷೆ ಆರಂಭದ ಕೆಲವೇ ದಿನಗಳಲ್ಲಿ ಹಾವು ಕಚ್ಚಿ ಆಕೆ ಮನೆಯಲ್ಲೇ ಇರುವಂತಾಯಿತು. ಮತ್ತೊಬ್ಬ ಬಾಲಕಿ ಸೈಕಲ್ ಓಡಿಸುವ ಸಂದರ್ಭದಲ್ಲಿ ಬಿದ್ದು ಕೈಗೆ ಗಂಭೀರ ಗಾಯ ಮಾಡಿಕೊಂಡು ದೂರ ಉಳಿಯಬೇಕಾಯಿತು. ಲಾಕ್‌ಡೌನ್ ಕಾರಣಕ್ಕೆ ಬೇರೆ ಊರಿಗೆ ತೆರಳಿದ್ದ 10ಕ್ಕೂ ಅಧಿಕ ಮಕ್ಕಳು ಅಲ್ಲಿಂದಲೂ ಪರೀಕ್ಷೆ ಬರೆಯದೆ ದೂರ ಉಳಿದಿದ್ದರು. ಕೆಮ್ಮು, ಶೀತ, ಜ್ವರ ಇತರ ಸಣ ಪುಟ್ಟ ಕಾಯಿಲೆಗೆ ಒಳಗಾದ ಬಹುತೇಕ ಮಕ್ಕಳ ಪಾಲಕರು ಮುಂದಿನ ವರ್ಷ ಪರೀಕ್ಷೆ ಬರೆದರಾಯಿತು ಎಂದು ಹೇಳಿದ್ದು ಗೈರಿಗೆ ಕಾರಣವಾಗಿದೆ.
ಪೂರಕ ಪರೀಕ್ಷೆಗೆ ಸಾಕಷ್ಟು ಸಮಯ: ಪರೀಕ್ಷೆಗೆ ಗೈರು ಹಾಜರಾಗಿರುವ ಮಕ್ಕಳಿಗೆ ಪೂರಕ ಪರೀಕ್ಷೆ ಬರೆಯಲು ಸಾಕಷ್ಟು ಸಮಯಾವಕಾಶ ದೊರೆತಿದೆ. ಮೊದಲು ಪರೀಕ್ಷೆಯ ಫಲಿತಾಂಶ ಬರಬೇಕು, ಶಾಲೆ ಪ್ರಾರಂಭವಾಗಬೇಕು, ನಂತರ ಪೂರಕ ಪರೀಕ್ಷೆಗೆ ದಿನಾಂಕ ನಿಗದಿಯಾಗಬೇಕು. ಪೂರಕ ಪರೀಕ್ಷಾರ್ಥಿಗಳನ್ನೂ ಪುನರಾವರ್ತಿತರು ಎಂಬ ಪಟ್ಟಿಯಲ್ಲಿ ಈ ಬಾರಿ ಸೇರಿಸುವುದಿಲ್ಲ. ಎಲ್ಲರಂತೆ ಅವರು ನಿಯಮಿತ ವಿದ್ಯಾರ್ಥಿಗಳ ಸಾಲಿಗೆ ಸೇರಿಸಲಾಗುತ್ತದೆ. ಒಟ್ಟಿನಲ್ಲಿ ಓದಿಗೆ ಹೆಚ್ಚಿನ ಸಮಯ ಸಿಕ್ಕಂತಾಗಿದೆ.
ಪ್ರಥಮ ಸ್ಥಾನ ಉಳಿಯುವುದೇ?: ಕಳೆದ ಬಾರಿ ಗಳಿಸಿದ ಶೇ.85 ಫಲಿತಾಂಶದ ಮೂಲಕ ರಾಜ್ಯವೇ ತಿರುಗಿ ನೋಡುವಂತೆ ಮಾಡಿದ್ದ ಹಾಸನ ಜಿಲ್ಲೆಗೆ ಈ ಬಾರಿಯೂ ಆ ಸ್ಥಾನ ಉಳಿಯುವುದೇ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಕಳೆದ ವರ್ಷದಂತೆಯೇ ಆರಂಭದಿಂದ ತಯಾರಿ ನಡೆಸಲಾಗಿತ್ತಾದರೂ ಲಾಕ್‌ಡೌನ್ ಸಮಯದಲ್ಲಿ ಸತತ ಎರಡು ತಿಂಗಳು ಶಾಲೆಗೆ ರಜೆ ನೀಡಿದ್ದರಿಂದ ಮಕ್ಕಳು ಅಧ್ಯಯನದಲ್ಲಿ ನಿರತರಾಗಲು ಸಾಧ್ಯವಾಗಲಿಲ್ಲ. ಆನ್‌ಲೈನ್ ತರಗತಿಗೆ ಶಿಕ್ಷಣ ಇಲಾಖೆ ಒತ್ತು ನೀಡಲಾಯಿತಾದರೂ ಶೇ.50 ರಷ್ಟು ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿಲ್ಲ. ಪ್ರಥಮ ಸ್ಥಾನ ಹಿರಿಮೆಗಾಗಿ ನಡೆಸಿದ ಕಸರತ್ತು ಏನಾಗುತ್ತದೆ ಎಂಬುದನ್ನು ಫಲಿತಾಂಶದವರೆಗೆ ಕಾಯಬೇಕಾಗಿದೆ.
ತರಗತಿಗೆ ಹಾಜರಾಗಿ ಪರೀಕ್ಷೆಗೆ ಗೈರಾದ 60 ವಿದ್ಯಾರ್ಥಿಗಳನ್ನು ಪೂರಕ ಪರೀಕ್ಷೆಗೆ ತಯಾರಿಗೊಳಿಸಲಾಗುತ್ತಿದೆ. ಈಗ ಅಣುತ್ತೀರ್ಣರಾದ ವಿದ್ಯಾರ್ಥಿಗಳಿಗೆ ನಡೆಸುವ ಪೂರಕ ಪರೀಕ್ಷೆಯಲ್ಲೇ ಈ ಮಕ್ಕಳು ಹಾಜರಾಗಬೇಕು. ಹಾಜರಾತಿ ಕಡಿಮೆಯಿದ್ದ ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ.
ಕೆ.ಎಸ್. ಪ್ರಕಾಶ್, ಡಿಡಿಪಿಐ ಹಾಸನ