

ವಿಜಯವಾಣಿ ಸುದ್ದಿಜಾಲ ಧಾರವಾಡ
ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಮಾ. 21ರಿಂದ ಏ. 4ರವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 1.15ರವರೆಗೆ ಜರುಗಲಿವೆ. ಪರೀಕ್ಷೆಯನ್ನು ವ್ಯವಸ್ಥಿತವಾಗಿ ಜರುಗಿಸಲು ಜಿಲ್ಲಾಡಳಿತ ಸಿದ್ಧತೆ ಮಾಡಿಕೊಂಡಿದೆ. ಸರ್ಕಾರದ ಆದೇಶದಂತೆ ಪರೀಕ್ಷೆಗಳ ಲೈವ್ ವೆಬ್ ಸ್ಟ್ರೀಮಿಂಗ್‌ಗಾಗಿ ಜಿಲ್ಲಾ ಪಂಚಾಯತಿಯಲ್ಲಿ ವೆಬ್ ಕಾಸ್ಟಿಂಗ್ ಕೇಂದ್ರ ಸ್ಥಾಪಿಸಲಾಗಿದೆ. ಇಲ್ಲಿ ನೇಮಕವಾದ ಅಧಿಕಾರಿ, ಸಿಬ್ಬಂದಿ ಪರೀಕ್ಷೆ ಕೇಂದ್ರಗಳ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಸ್ಥಾಪಿಸಿರುವ ವೆಬ್ ಕಾಸ್ಟಿಂಗ್ ಕೇಂದ್ರಕ್ಕೆ ಮಂಗಳವಾರ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದ ನಂತರ ಅವರು ಮಾತನಾಡಿದರು.
ಜಿಲ್ಲೆಯಲ್ಲಿ 106 ಪರೀಕ್ಷಾ ಕೇಂದ್ರಗಳಿದ್ದು, 1,310 ಪರೀಕ್ಷಾ ಕೊಠಡಿಗಳಿವೆ. ಪರೀಕ್ಷಾ ಕೊಠಡಿ, ಮುಖ್ಯ ಪರಿವೀಕ್ಷಕರ ಕೊಠಡಿ, ಕಾರಿಡಾರ್ ಸೇರಿ 1,522 ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ನಿರಂತರ ನಿಗಾ ವಹಿಸಲು ಸಿಬ್ಬಂದಿ ನೇಮಿಸಿ ತರಬೇತಿ ನೀಡಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ ಮಾತನಾಡಿ, ಪರೀಕ್ಷಾ ಕೇಂದ್ರಗಳಲ್ಲಿ ನಿಯಮಬಾಹಿರ ವರ್ತನೆ ಕಂಡುಬAದರೆ ತಕ್ಷಣ ಸಂಬ0ಧಿಸಿದವರಿಗೆ ಮಾಹಿತಿ ನೀಡಿ ಕ್ರಮ ಜರುಗಿಸಲು ಸೂಚಿಸಲಾಗಿದೆ. ವಿದ್ಯಾರ್ಥಿಗಳು ನಿರ್ಭೀತಿಯಿಂದ ಪರೀಕ್ಷೆ ಬರೆಯುವ ವಾತಾವರಣ ರೂಪಿಸಲಾಗಿದೆ ಎಂದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಎಸ್. ಕೆಳದಿಮಠ, ವೆಬ್ ಕಾಸ್ಟಿಂಗ್ ಕೇಂದ್ರದ ನೋಡಲ್ ಅಽಕಾರಿ ಪ್ರಭಯ್ಯ ಚಿಕ್ಕಮಠ, ಇತರರಿದ್ದರು.
ಪರೀಕ್ಷಾ ವೇಳಾಪಟ್ಟಿ
ಮಾ. 21: ಪ್ರಥಮ ಭಾಷೆ, 24ರಂದು ಗಣಿತ, 26ರಂದು ದ್ವಿತೀಯ ಭಾಷೆ, 29ರಂದು ಸಮಾಜ ವಿಜ್ಞಾನ, ಏ. 1ರಂದು ಜೆ.ಟಿ.ಎಸ್. ವಿಷಯಗಳು, ಏ. 2ರಂದು ವಿಜ್ಞಾನ ಹಾಗೂ ಏ. 4ರಂದು ತೃತೀಯ ಭಾಷೆ ಪರೀಕ್ಷೆ ಜರುಗಲಿದೆ.