

ಗಂಗಾವತಿ: ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷಾಶುಲ್ಕ ಹೆಚ್ಚಿಸಿರುವ ಕ್ರಮ ಖಂಡಿಸಿ ನಗರದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನ ಮುಂಭಾಗ ಕಾಲೇಜಿನ ವಿದ್ಯಾರ್ಥಿನಿಯರೊಂದಿಗೆ ಎಸ್‌ಎ್ಐ ತಾಲೂಕು ಸಮಿತಿ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್‌ಗೆ ಮನವಿ ಸಲ್ಲಿಸಿದರು. ನಂತರ ತಾಪಂ ಕಚೇರಿಗೆ ತೆರಳಿ ವ್ಯವಸ್ಥಾಪಕಿ ವತ್ಸಲಾರಿಗೆ ಸಲ್ಲಿಸಿದರು.
ಸಮಿತಿ ತಾಲೂಕು ಕಾರ್ಯದರ್ಶಿ ಗ್ಯಾನೇಶ ಕಡಗದ್ ಮಾತನಾಡಿ, ವಿಜಯಪುರ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಪರೀಕ್ಷೆ ಶುಲ್ಕ 750ರೂ., ಘಟಿಕೋತ್ಸವಕ್ಕೆ 550ರೂ. ಮತ್ತು ಉತ್ತೀರ್ಣ ಪ್ರಮಾಣ ಪತ್ರಕ್ಕೆ 240ರೂ. ವಸೂಲಿ ಮಾಡುತ್ತಿರುವುದು ಖಂಡನೀಯ. ಜಾತಿ ಮತ್ತು ಆದಾಯ ಪತ್ರ ಸಲ್ಲಿಸಿದ ವಿದ್ಯಾರ್ಥಿನಿಯರಿಗೆ 100ರೂ. ವಸೂಲಿ ಮಾಡಬೇಕೆಂಬ ಸರ್ಕಾರದ ನಿಯಮವಿದ್ದರೂ ಹೆಚ್ಚುವರಿ ವಸೂಲಿ ಮಾಡಲಾಗುತ್ತಿದೆ. ಮಹಿಳಾ ಕಾಲೇಜುಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ವಿದ್ಯಾರ್ಥಿನಿಯರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ಹೆಚ್ಚುವರಿ ವಸೂಲಿಯಿಂದ ಮಹಿಳೆಯರು ಶಿಕ್ಷಣದಿಂದ ದೂರವಾಗುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದವರಿಗೆ ಹೊರೆಯಾಗಿದೆ. ಶುಲ್ಕ ಕಡಿಮೆ ಮಾಡುವವರೆಗೂ ಹೋರಾಟ ಮುಂದುವರಿಯಲಿದೆ ಎಂದರು. ಸಮಿತಿ ಅಧ್ಯಕ್ಷ ಅಮರೇಶ ಕಡಗದ್, ಪದಾಧಿಕಾರಿಗಳಾದ ಶಿವಕುಮಾರ ಈಚನಾಳ್, ಬಾಳಪ್ಪ ಹುಲಿಹೈದರ್, ವಿದ್ಯಾರ್ಥಿನಿಯರಾದ ರಂಜಿತಾ, ಲಕ್ಷ್ಮಿ, ಚನ್ನಮ್ಮ ಇತರರಿದ್ದರು.