ಸಾಧನೆಗೆ ಪರಿಶ್ರಮದ ಜತೆ ನಿಖರ ಗುರಿ ಮುಖ್ಯ

6 TKE 1(1)
Published on

ತರೀಕೆರೆ: ಸಾಧನೆಗೆ ಕಠಿಣ ಪರಿಶ್ರಮದ ಜತೆ ನಿಖರವಾದ ಗುರಿ ಮುಖ್ಯ ಎಂದು ಡಾ.ಆರ್.ರವೀಶ್ ಮುಗಳಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಿಕೆಯ ಹಂತದಲ್ಲಿ ಮಕ್ಕಳು ಸಮಯ ವ್ಯರ್ಥ ಮಾಡದೆ ಓದಿನ ಕಡೆ ಗಮನ ಹರಿಸಬೇಕು. ಸತತ ಶ್ರಮವಹಿಸಿ ಯಶಸ್ಸಿನೆಡೆಗೆ ಸಾಗಬೇಕು. ಉತ್ತಮ ಚಿಂತನೆ, ಮಾನವೀಯ ಮೌಲ್ಯಗಳ ಅಳವಡಿಕೆ ನಮ್ಮನ್ನು ಉತ್ತುಂಗದ ಸ್ಥಾನಕ್ಕೆ ಕರೆದೊಯ್ಯಲಿದೆ. ಈ ದಿಸೆಯಲ್ಲಿ ಹೆಜ್ಜೆ ಹಾಕಿ ಸುಂದರ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಜನ್ಮಭೂಮಿ, ಮಾತೃಭಾಷೆ, ಹೆತ್ತ ತಾಯಿಯಷ್ಟೇ ಶ್ರೇಷ್ಠ. ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕನ್ನಡತನವನ್ನು ಎಂದಿಗೂ ಮರೆಯಬಾರದು. ಸಾಹಿತ್ಯ, ವಿವಿಧ ಲೇಖಕರ ಪುಸ್ತಕ ಓದು ಅಭಿರುಚಿ ರೂಢಿಸಿಕೊಳ್ಳುವುದು ಮಾತ್ರವಲ್ಲ ಕನ್ನಡ ಭಾಷೆ ಬೆಳವಣಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಪುರಸಭೆ ಮಾಜಿ ಸದಸ್ಯ ಎಂ.ನರೇಂದ್ರ ಮಾತನಾಡಿ, ಕನ್ನಡತನದ ಬೀಜಾಂಕುರ ಬೆಳೆಯಲು, ಮನಸ್ಸು, ಮನಸ್ಸುಗಳ ಬಾಂಧವ್ಯ ಬೆಸೆಯಲು ಕನ್ನಡ ರಾಜ್ಯೋತ್ಸವದಂಥ ಕಾರ್ಯಕ್ರಮ ಅಗತ್ಯ. ಪ್ರಗತಿಯ ಎಲ್ಲ ಹಂತದಲ್ಲೂ ಮಾತಭಾಷೆ ಬಳಕೆ ಮತ್ತು ಬೆಳವಣಿಗೆ ಮಾಡುವುದು ಕನ್ನಡಿಗರಾದ ನಮ್ಮೆಲ್ಲರ ಜವಾಬ್ದಾರಿಯಾಗಬೇಕು ಎಂದರು.

ಪ್ರಾಚಾರ್ಯ ಸಿದ್ದಪ್ಪ ಟಕ್ಕಳಕಿ, ಜಿಲ್ಲಾ ಕಸಾಪ ಸಂಚಾಲಕ ಇಮ್ರಾನ್ ಅಹಮದ್ ಬೇಗ್, ತಾಲೂಕು ಕಸಾಪ ಅಧ್ಯಕ್ಷ ರವಿ ದಳವಾಯಿ, ಪ್ರಧಾನ ಕಾರ್ಯದರ್ಶಿ ತ.ಮ.ದೇವಾನಂದ್, ಸಂಗೊಳ್ಳಿ ರಾಯಣ್ಣ ಯುವ ವೇದಿಕೆ ಅಧ್ಯಕ್ಷ ಟಿ.ಎಸ್.ದರ್ಶನ್, ಪ್ರಮುಖರಾದ ಕೆ.ಎಸ್.ಶಿವಣ್ಣ, ಉಮಾ, ತಮ್ಮಯ್ಯ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net