ಮತ್ತೆ ಕ್ಷಮೆ ಕೇಳಿದ ರಮೇಶ್​ಕುಮಾರ್

Rameshkumar
Published on

ಬೆಂಗಳೂರು: ವಿಧಾನಸಭೆ ಅಧಿವೇಶನದಲ್ಲಿ ಕಾಂಗ್ರೆಸ್​ನ ರಮೇಶ್​ಕುಮಾರ್ ಬಳಸಿದ ಪದವೊಂದನ್ನು ಅಸಂಸದೀಯ ಎಂದು ಪರಿಗಣಿಸಿ ಸ್ಪೀಕರ್ ಕಡತದಿಂದ ತೆಗೆದು ಹಾಕಿಸಿದ ಪ್ರಸಂಗ ನಡೆದರೆ, ಸಚಿವ ಡಾ.ಕೆ.ಸುಧಾಕರ್ ಅವರು ರಮೇಶ್​ಕುಮಾರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಕರೊನಾ ಖರೀದಿ ಹಗರಣ ಆರೋಪಕ್ಕೆ ಸಂಬಂಧಿಸಿದಂತೆ ಡಾ.ಸುಧಾಕರ್ ಉತ್ತರ ನೀಡುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡ ರಮೇಶ್​ಕುಮಾರ್, ‘ಸಚಿವರು ಆರೋಪಗಳನ್ನು ನಿರಾಕರಿಸುತ್ತಿದ್ದಾರೆ. ಖರೀದಿ ಅವ್ಯವಹಾರಗಳನ್ನು ಸಮರ್ಥಿಸಿ ಕೊಳ್ಳುತ್ತಿದ್ದಾರೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ದೊಡ್ಡ ಮನುಷ್ಯರು ಹಲ್ಕಾ ಕೆಲಸ ಮಾಡಿದರೂ ಸಹಿಸಿಕೊಳ್ಳಬೇಕಾ‘ ಎಂದು ಏರುದನಿಯಲ್ಲಿ ಪ್ರಶ್ನಿಸಿದರು. ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಧಾಕರ್, ಬಾಯಿ ಹಿಡಿದು ಮಾತನಾಡಿ. ಅವಾಚ್ಯ ಶಬ್ಧ ಏಕೆ ಬಳಸುತ್ತೀರಿ? ಹಲ್ಕಾ ಎಂದರೆ ಏನು? ನಿಮಗೆ ನೈತಿಕತೆ ಇದೆಯಾ? ಎಂದು ರಮೇಶ್​ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರು.

ನೀವು ಈ ರೀತಿ ಮಾತನಾಡುತ್ತಿರುವುದು ಇದೇ ಮೊದಲೇನಲ್ಲ. ಎರಡು ಬಾರಿ ಇದೇ ರೀತಿ ಬಾಯಿಗೆ ಬಂದಂತೆ ಮಾತನಾಡಿದ್ದೀರಿ. ನೀವು ಸ್ಪೀಕರ್ ಸ್ಥಾನದಲ್ಲಿ ಕುಳಿತಿದ್ದವರು. ಈ ರೀತಿ ಮಾತನಾಡಬಹುದೇ? ಇದನ್ನು ನಾನು ಸಾರಾಸಗಟಾಗಿ ಖಂಡಿಸುತ್ತೇನೆ. ಇಂತಹ ಮಾತುಗಳನ್ನು ಸಹಿಸಲು ಸಾಧ್ಯವೇ ಇಲ್ಲ. ನೀವು ಆಡಿದ ಮಾತು ಹಿಂಪಡೆಯಬೇಕು ಹಾಗೂ ಸದನಕ್ಕೆ ಕ್ಷಮೆ ಕೇಳಬೇಕು ಎಂದು ಸುಧಾಕರ್ ಪಟ್ಟು ಹಿಡಿದರು.

ಮನ ನೋಯಿಸುವ ಶಬ್ಧಗಳಿವೆ: ಸುಧಾಕರ್ ಮಾತಿಗೆ ದನಿಗೂಡಿಸಿದ ಡಿಸಿಎಂ ಲಕ್ಷ್ಮಣ ಸವದಿ, ನೀವು ಸ್ಪೀಕರ್ ಸ್ಥಾನದಲ್ಲಿದ್ದವರು. ಬೇರೆಯವರಿಗೆ ಮಾರ್ಗದರ್ಶನ ಮಾಡಬೇಕು. ಅನೇಕ ಮನ ನೋಯಿಸಬಹುದಾದ ಶಬ್ಧಗಳಿವೆ. ಬೇರೆ ಶಬ್ಧ ಇದ್ದರೆ ಹೇಳಿ ಎಂದು ಕೇಳಿದರೆ ಹೇಗೆ? ಎಂದು ರಮೇಶ್​ಕುಮಾರ್​ರನ್ನು ಕುಟುಕಿದರು. ಬಿಜೆಪಿ ಸದಸ್ಯರು ರಮೇಶ್​ಕುಮಾರ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ಧಾಳಿ ನಡೆಸಿದರು. ಮಧ್ಯ ಪ್ರವೇಶಿಸಿದ ಈಶ್ವರಪ್ಪ, ಇಡೀ ರಾಜ್ಯವೇ ನೋಡುತ್ತಿದೆ. ನೀವು ಬಳಸಿದ ಪದವನ್ನು ಸಮರ್ಥನೆ ಮಾಡಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು. ಜತೆಗೆ ರಮೇಶ್​ಕುಮಾರ್ ಹೇಳಿದ ಪದವನ್ನೇ 2-3 ಸಲ ಬಳಸಿ ಚುಚ್ಚಿದರು.

ಆವೇಶಕ್ಕೆ ಒಳಗಾಗಿ ಹೇಳಿಕೆ

ನಾನು ಬಳಸಿದ ಪದ ಅಸಂಸದೀಯ ಎಂದಾದರೆ ಈಗಲೇ ಕ್ಷಮೆ ಕೇಳುತ್ತೇನೆ. ನನಗೇನೂ ಪ್ರತಿಷ್ಠೆ ಇಲ್ಲ. ಕ್ಷಮೆ ಕೇಳುವುದರಿಂದ ನನ್ನ ಯೋಗ್ಯತೆ ಏನೂ ಕಮ್ಮಿಯಾಗುವುದಿಲ್ಲ. ಆ ಪದವನ್ನು ಸ್ಪೀಕರ್ ಕಡತದಿಂದ ತೆಗೆದು ಹಾಕಲಿ ಎಂದು ರಮೇಶ್​ಕುಮಾರ್ ಸಲಹೆ ನೀಡಿದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಅಸಂಸದೀಯ ಪದಗಳ ಪಟ್ಟಿಯೇ ಇದೆ. ಸದ್ಯಕ್ಕೆ ಅದು ನಮಗೆ ಸಿಗುತ್ತಿಲ್ಲ. ಅದೇನೇ ಇರಲಿ, ರಮೇಶ್​ಕುಮಾರ್ ಬಳಸಿದ ಆ ಪದ ಸೌಜನ್ಯದ ಭಾಷೆ ಅಲ್ಲ. ಆ ಪದವನ್ನು ಅಸಂಸದೀಯ ಎಂದು ಪರಿಗಣಿಸಲಾಗುವುದು. ಬೇರೆ ಬೇರೆಯವರೂ ಬಳಸಿದ್ದು ಕಡತದಿಂದ ತೆಗೆದುಹಾಕಿಸಲಾಗುವುದು ಎಂದು ಹೇಳಿದರು. ಸ್ಪೀಕರ್ ಆದೇಶಕ್ಕೆ ಪ್ರತಿಕ್ರಿಯಿಸಿದ ರಮೇಶ್​ಕುಮಾರ್, ಆವೇಶಕ್ಕೆ ಒಳಗಾಗಿ ಆಕ್ಷೇಪಾರ್ಹ ಪದ ಮಾತನಾಡಿದ್ದೇನೆ. ನಾನೇನು ದೇವಲೋಕದಿಂದ ಇಳಿದವನಲ್ಲ. ಉದ್ವೇಗದಲ್ಲಿ ಆ ಪದ ಬಳಸಿದ್ದೇನೆ. ಸರಿ ಇಲ್ಲ ಎನ್ನುವುದಾದರೆ ವಾಪಸ್ ಪಡೆಯುತ್ತೇನೆ ಎಂದಾಗ ವಿವಾದ ತಣ್ಣಗಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net