

ರಟ್ಟಿಹಳ್ಳಿ: ಸರ್ಕಾರದ ನಿಯಮಾನುಸಾರ ಮಾಜಿ ಸೈನಿಕರಿಗೆ ಕೊಡಮಾಡುವ ಸರ್ಕಾರಿ ಜಮೀನನ್ನು ತಾಲೂಕಿನ ವ್ಯಾಪ್ತಿಯಲ್ಲಿ ಮಂಜೂರು ಮಾಡಬೇಕೆಂದು ಆಗ್ರಹಿಸಿ ತಾಲೂಕಿನ ಹಿರೇಕಬ್ಬಾರ ಗ್ರಾಮದ ಮಾಜಿ ಸೈನಿಕ ಮತ್ತು ಕುಟುಂಬಸ್ಥರು ತಹಸೀಲ್ದಾರ್ ಕಚೇರಿ ಆವರಣದಲ್ಲಿ ಸೋಮವಾರ ಮನೆ ಸಾಮಾನುಗಳೊಂದಿಗೆ ಆಗಮಿಸಿ ಧರಣಿ ನಡೆಸಿದರು
ನಿವೃತ್ತ ಸೈನಿಕ ಸುರೇಂದ್ರ ಶಿವಪ್ಪ ಹಲಗೇರಿ ಮಾತನಾಡಿ, 1980ರಲ್ಲಿ ಸೇನೆಗೆ ಸೇರ್ಪಡೆಯಾಗಿದ್ದೆ. ದೆಹಲಿ, ಮಹಾರಾಷ್ಟ್ರ, ಮಥುರಾ, ಸಹಜನಪುರ, ರಾಮಗಡ, ರಾಂಚಿ ಸೇರಿದಂತೆ ವಿವಿಧೆಡೆ ಸೈನಿಕ ವೃತ್ತಿ ಸಲ್ಲಿಸಿ 1997ರಲ್ಲಿ ನಿವೃತ್ತಿಯಾದೆ. ನಿವೃತ್ತ ಬಳಿಕ ಹಿರೇಕೆರೂರು ತಹಸೀಲ್ದಾರ್ ಕಚೇರಿಗೆ ಸರ್ಕಾರದ ನಿಯಮದಂತೆ ಸರ್ಕಾರಿ ಜಮೀನು ಮಂಜೂರು ಮಾಡಬೇಕೆಂದು ಮನವಿ ಸಲ್ಲಿಸಿದೆ.
ಕಳೆದ 26 ವರ್ಷಗಳಿಂದ ತಾಲೂಕಾಡಳಿತ ಮತ್ತು ಜಿಲ್ಲಾಡಳಿತಕ್ಕೆ ಹಲವು ಬಾರಿ ಮನವಿ ಸಲ್ಲಿಸುತ್ತ ಬಂದಿದ್ದೇನೆ. 2022ರಲ್ಲಿ ರಟ್ಟಿಹಳ್ಳಿ ತಹಸೀಲ್ದಾರ್ ಕಚೇರಿ ಮೂಲಕ ತಾಲೂಕಿನ ಜೋಕನಾಳ ಗ್ರಾಮದಲ್ಲಿ 4 ಎಕರೆ ಭೂಮಿ ಮಂಜೂರು ಮಾಡಿ ತಹಸೀಲ್ದಾರ್ ಆದೇಶ ಹೊರಡಿಸಿದ್ದರು. ಈ ಭೂಮಿ ಗೋಮಾಳ ಜಮೀನು ಎಂಬ ಆಧಾರದ ಮೇಲೆ ಸ್ಥಳೀಯರು ಮತ್ತು ಗ್ರಾಮ ಪಂಚಾಯಿತಿ ಮನವಿ ಮೇರೆಗೆ ಮಂಜೂರಾದ ಭೂಮಿಯನ್ನು ವಜಾ ಮಾಡಲಾಗಿದೆ. ಆ ಮೇಲೆ ಜಾಗ ನೀಡಿಲ್ಲ.
ಕೂಡಲೇ ತಾಲೂಕಾಡಳಿತ ನಮಗೆ ಸರ್ಕಾರಿ ಭೂಮಿ ಮಂಜೂರು ಮಾಡಬೇಕು. ಅಲ್ಲಿಯವರೆಗೆ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ಮುಂದುವರಿಸಲಾಗುವುದು ಎಂದು ತಿಳಿಸಿದರು.