ಗಡಿ ಕಾವಲಿನ ಬಳಿಕ ಸ್ಮಶಾನ ಕಾಯುವ ಸೈನಿಕ ; ಗಿಡ ಮರ ಬೆಳೆಸುತ್ತಾ ಸಂತೃಪ್ತಿ ಜೀವನ

M.26 dhl Yodha smashana news ph-1 (1)
Published on

ದೇವನಹಳ್ಳಿ :  ಸೇನೆಯಿಂದ ನಿವೃತ್ತರಾದ ಬಳಿಕ ಮಾಜಿ ಯೋಧರು ತಮ್ಮದೇ ರೀತಿಯಲ್ಲಿ ಜೀವನ ಮುನ್ನಡೆಸುತ್ತಾರೆ. ಆದರೆ, ಇಲ್ಲೊಬ್ಬ ನಿವೃತ್ತ ಯೋಧ ಸ್ಮಶಾನ ಕಾಯುವ ಮೂಲಕ ಜೀವನ ನಡೆಸುತ್ತಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಸ್ಮಶಾನ ಸ್ವಚ್ಛಗೊಳಿಸುವ ಇವರು, ಗಿಡ ಮರಗಳನ್ನು ಬೆಳೆಸುತ್ತಾ ಅವುಗಳ ನೆರಳಿನಲ್ಲಿ ಜೀವನ ಕಳೆಯುತ್ತಿದ್ದಾರೆ.

ದೇವನಹಳ್ಳಿ ತಾಲೂಕಿನ ಅಣೇಶ್ವರ ಗ್ರಾಮದ ದಿ. ಗಿರಿಯಪ್ಪ ಪಾರ್ವತಮ್ಮ ದಂಪತಿ ಪುತ್ರ ಜಿ.ನಾಗೇಶ್ ಈ ಅನುಪಮ ಸೇವೆ ಸಲ್ಲಿಸುತ್ತಿರುವರು. 1993ರಲ್ಲಿ ಸೇನೆಗೆ ಆಯ್ಕೆಯಾಗಿ 2014ರಲ್ಲಿ ನಿವೃತ್ತಿ ಪಡೆದುಕೊಂಡಿದ್ದಾರೆ. 2012ರಲ್ಲಿ ನನ್ನ ಸಹೋದರ ಜಿ.ಮುರಳಿ ದೈವಾಧೀನರಾದಾಗ ಅವರ ಅಂತ್ಯಕ್ರಿಯೆಗೆ ಬಂದಿದ್ದೆ. ಆಗ ಸ್ಮಶಾನದ ಸ್ಥಿತಿಗತಿ ಕಂಡು ಬೇಸರವಾಗಿತ್ತು. ನಿವೃತ್ತಿಯ ಬಳಿಕ ಸ್ಮಶಾನ ಅಭಿವೃದ್ಧಿಪಡಿಸುವ ಕನಸನ್ನು ಆಗಲೇ ಕಟ್ಟಿಕೊಂಡಿದ್ದೆ ಎನ್ನುತ್ತಾರೆ ಜಿ.ನಾಗೇಶ್.

2015ರ ಏಪ್ರಿಲ್‌ನಲ್ಲಿ ತಂದೆ ಮೃತರಾದರು. ಇದೇ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನನ್ನ ತಾಯಿ ಮಾನಸಿಕ ಅಸ್ವಸ್ಥರಾದರು. ಆ ನಂತರದಲ್ಲಿ ನಾನು ಇದೇ ಸ್ಮಶಾನದಲ್ಲಿ ಪವಡಿಸಿರುವ ನನ್ನ ಸಹೋದರ ಮತ್ತು ತಂದೆಯೊಂದಿಗೆ ಬಾಳಬೇಕು ಎಂದು ಬಯಸಿ ಸ್ಮಶಾನ ಕಾಯುವ, ಅಭಿವೃದ್ಧಿಪಡಿಸುವ ಕೆಲಸವನ್ನು ಸ್ವಪ್ರೇರಣೆಯಿಂದ ಆರಂಭಿಸಿದೆ ಎಂದು ವಿವರಿಸುತ್ತಾರೆ ನಾಗೇಶ್.

400ಕ್ಕೂ ಹೆಚ್ಚು ಸಸಿ ನಾಟಿ: ಸ್ಮಶಾನಕ್ಕೆ ಕಾಲಿರಿಸಿದ ಮೊದಲ ದಿನದಿಂದ ಇಲ್ಲಿ ಬೆಳೆದಿದ್ದ ಮುಳ್ಳಿನ ಪೊದೆಗಳನ್ನು ತೆರವುಗೊಳಿಸಿದ್ದಾರೆ. 400ಕ್ಕೂ ಹೆಚ್ಚು ಸಮಾಧಿಗಳ ಪಕ್ಕ ಸಸಿಗಳನ್ನು ನೆಟ್ಟಿದ್ದಾರೆ. ಪಕ್ಕದಲ್ಲಿರುವ ಕೆರೆಯಿಂದ ಪ್ರತಿನಿತ್ಯ ನೀರು ತಂದು ಹಾಕಿ ಆ ಸಸಿಗಳನ್ನು ಪೋಷಿಸುತ್ತಿದ್ದಾರೆ. ಶವಸಂಸ್ಕಾರಕ್ಕೆ ಬರುವವರಿಗೆ ತಮ್ಮಿಂದಾಗುವ ಸಹಕಾರ ನೀಡುತ್ತಿದ್ದಾರೆ. ಇಷ್ಟಾದರೂ ಯಾವುದೇ ಪ್ರಚಾರ, ಪ್ರತಿಲಾಪೇಕ್ಷೆ ಇಲ್ಲದೆ ಬದುಕುತ್ತಿದ್ದಾರೆ. ಬೆಳಗ್ಗೆ 8ಕ್ಕೆ ಸ್ಮಶಾನಕ್ಕೆ ಬರುವ ಅವರು ಮಧ್ಯಾಹ್ನ 12ರವರೆಗೆ ಗಿಡ, ಮರಗಳ ಪೋಷಣೆ, ಸ್ವಚ್ಛತೆಯಲ್ಲಿ ತೊಡಗಿಕೊಳ್ಳುತ್ತಾರೆ. ಬಳಿಕ ಮನೆಗೆ ಹೋಗುವ ಅವರು, ತಿಂಡಿ, ಊಟ ಮುಗಿಸಿಕೊಂಡು ಬಂದು ರಾತ್ರಿ 8ರವರೆಗೂ ಸ್ಮಶಾನದಲ್ಲೇ ಇದ್ದು ಕಾವಲು ಕಾಯುತ್ತಾರೆ. ಸ್ಮಶಾನ ನಿರ್ವಹಣೆಗೆ ಯಾರೊಬ್ಬರ ಬಳಿಯೂ ಹಣಕ್ಕೆ ಕೈಯೊಡ್ಡದ ಇವರು, ತಾವೇ ಬೆಳೆಸಿರುವ ಹೂವಿನ ಗಿಡಗಳಿಂದ ಹೂವುಗಳನ್ನು ಕಿತ್ತು ಮಾರಿ ಬರುವ ಹಣ ಮತ್ತು ಪಿಂಚಣಿ ಹಣದಲ್ಲೇ ಸ್ಮಶಾನ ನಿರ್ವಹಣೆಯ ಖರ್ಚು ವೆಚ್ಚ ನಿಭಾಯಿಸುತ್ತಿದ್ದಾರೆ.

ಕಾಂಪೌಂಡ್ ನಿರ್ಮಿಸಲು ನಿರ್ಲಕ್ಷ್ಯ : ಶವ ತರಲು ಸಮರ್ಪಕವಾದ ರಸ್ತೆ ಇಲ್ಲ. ಆದ್ದರಿಂದ, 1.6 ಎಕರೆ ವಿಸ್ತೀರ್ಣದ ಸ್ಮಶಾನವನ್ನು ಸರ್ವೇ ಮಾಡಿಸಿ, ಕಾಂಪೌಂಡ್ ನಿರ್ಮಿಸಿ ಕೊಡಬೇಕು. ಜತೆಗೆ ಸಮರ್ಪಕವಾದ ರಸ್ತೆ ಮಾಡಿಕೊಟ್ಟು, ಬೀದಿದೀಪ, ಕೊಳವೆಬಾವಿ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಪಂ, ತಹಸೀಲ್ದಾರ್ ಹಾಗೂ ಶಾಸಕರಿಗೆ ಮನವಿ ಮಾಡಿಕೊಂಡಿದ್ದೇನೆ. 5 ವರ್ಷಗಳಿಂದ ಪದೇಪದೆ ಮನವಿ ಸಲ್ಲಿಸಿದರೂ, ಅಭಿವೃದ್ಧಿಗೆ ಯಾರೊಬ್ಬರೂ ಮುಂದಾಗುತ್ತಿಲ್ಲ ಎಂದು ನಾಗೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ: ನಮ್ಮ ಗ್ರಾಪಂನಲ್ಲಿ ಕೋಟ್ಯಂತರ ರೂಪಾಯಿ ತೆರಿಗೆ ಹಣ ಕೊಳೆಯುತ್ತಿದ್ದರೂ, ಸ್ಮಶಾನಕ್ಕೆ ಸಮರ್ಪಕವಾದ ರಸ್ತೆ ಮಾಡಿಕೊಡುವಲ್ಲಿ, ಬೀದಿದೀಪ, ಕೊಳವೆಬಾವಿ ಕೊರೆಸಿಕೊಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಡಾ.ಎ.ಎಂ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾಗೇಶ್ ಅವರನ್ನು ಪ್ರೋತ್ಸಾಹಿಸುವ ಸೌಜನ್ಯವನ್ನೂ ಜನಪ್ರತಿನಿಧಿ ಮತ್ತು ಅಧಿಕಾರಿಗಳು ತೋರುತ್ತಿಲ್ಲ ಎಂದು ಬೇಸರಿಸಿದ್ದಾರೆ.

ನಿವೃತ್ತ ಯೋಧ ನಾಗೇಶ್ ಅವರು 50 ಸಾವಿರ ರೂ. ಖರ್ಚು ಮಾಡಿ, ಸ್ಮಶಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಆದರೆ, ಗ್ರಾಪಂ ಅಧಿಕಾರಿಗಳು ನರೇಗಾದಡಿ ಸ್ಮಶಾನ ಅಭಿವೃದ್ಧಿಪಡಿಸಿರುವುದಾಗಿ 1.40 ಲಕ್ಷ ರೂ. ನಕಲಿ ಬಿಲ್ ಸೃಷ್ಟಿಸಿ ಹಣ ತಿಂದಿರುವ ಆರೋಪವಿದೆ. ನಾಗರಾಜ್, ಗೃಹರಕ್ಷಕ ದಳದ ಸಿಬ್ಬಂದಿ ಯೋಧ ನಾಗೇಶ್ ಅವರ ನಿಸ್ವಾರ್ಥ ಸೇವೆಯನ್ನು ಜನ ಮೆಚ್ಚಿಕೊಳ್ಳುತ್ತಾರೆ. ಆದರೆ, ಇವರ ಕೆಲಸವನ್ನು ಮರೆಮಾಚುವ ರೀತಿಯಲ್ಲಿ ಗ್ರಾಪಂ ಅಧಿಕಾರಿಗಳು ಭ್ರಷ್ಟಾಚಾರ ಎಸಗಿರುವುದು ಅಕ್ಷಮ್ಯ. ಎ.ಚಂದ್ರಶೇಖರ್, ಗ್ರಾಪಂ ಮಾಜಿ ಅಧ್ಯಕ್ಷ, ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net