ಹೃದಯಾಘಾತಕ್ಕೆ ತುತ್ತಾದ ಮಾಜಿ ಸೈನಿಕ ಸಾವು

Ex-soldier dies of heart attack
ಯಲ್ಲನಗೌಡ ಪಾಟೀಲ
Published on

ಕಮತಗಿ: ಯೋಧ ಮಂಜುನಾಥನಿಗೆ ಜಯವಾಗಲಿ…ಭಾರತ ಮಾತಾಕೀ ಜೈ… ಎಂದು ಘೋಷಣೆ ಕೂಗುತ್ತಿದ್ದ ಮಾಜಿ ಸೈನಿಕ ಮಂಗಳವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಬಸವನಾಳ ಗ್ರಾಮದಲ್ಲಿ ನಡೆದ ಯೋಧ ಮಂಜುನಾಥನ ಪಾರ್ಥಿವ ಶರೀರ ಮೆರವಣಿಗೆಯಲ್ಲಿ ಮರಡಿಬೂದಿಹಾಳದ ಮಾಜಿ ಸೈನಿಕ ಯಲ್ಲನಗೌಡ ಹನಮಗೌಡ ಪಾಟೀಲ (62) ಭಾಗವಹಿಸಿದ್ದರು. ವಿವಿಧ ಘೋಷಣೆಗಳನ್ನು ಕೂಗುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಆಗ ಅವರು ಮನೆಗೆ ತೆರಳಿದ್ದಾರೆ. ಅಲ್ಲಿ ಹೃದಯಾಘಾತವಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಅವರ ಅಂತ್ಯಕ್ರಿಯೆ ಆ.14 ರಂದು ನಡೆಯಲಿದೆ.

ಸೇವೆ ವಿವರ: ಯಲ್ಲನಗೌಡ ಪಾಟೀಲ ಅವರು 1984ರಲ್ಲಿ ಭಾರತೀಯ ಸೇನೆ ಸೇರಿದ್ದರು. 18 ವರ್ಷಗಳವರೆಗೆ ಸೈನಿಕರಾಗಿ ದೇಶ ಸೇವೆ ಮಾಡಿದ್ದಾರೆ. ಪಂಜಾಬ, ನಾಗಾಲ್ಯಾಂಡ್, ದಿಲ್ಲಿ, ಪುಣೆ, ಲಡಾಕ್, ಬೆಂಗಳೂರು ಎಎಸ್‌ಸಿ ಸೆಂಟರ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಸೇನೆ ನಿವೃತ್ತಿ ಬಳಿಕ ಬೆಂಗಳೂರಿನ ಎಚ್‌ಎಎಲ್, ಬಿಪಿಎಲ್, ಎನ್‌ಎಎಲ್, ಬೆಂಗಳೂರು ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಸೂಪರ್‌ವೈಸರ್ ಆಗಿ ಸೇವೆ ಸಲ್ಲಿಸಿ ಎರಡು ವರ್ಷಗಳಿಂದ ಸ್ವಂತ ಊರು ಮರಡಿಬೂದಿಹಾಳದಲ್ಲಿ ವಾಸವಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net