ಮಾಜಿ ಸೈನಿಕರು ಸರ್ಕಾರಿ ಸವಲತ್ತುಗಳಿಂದ ವಂಚಿತ; ಬಿ.ಎ.ಕಾರ್ಯಪ್ಪ ಆರೋಪ

WhatsApp Image 2022-09-07 at 1.36.31 PM
Published on

ಮಡಿಕೇರಿ: ಜಿಲ್ಲೆಯ ಮಾಜಿ ಸೈನಿಕರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದಾರೆ ಎಂದು ನಿವೃತ್ತ ಮೇಜರ್ ಜನರಲ್ ಬಿ.ಎ.ಕಾರ್ಯಪ್ಪ ಆರೋಪಿಸಿದರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಸೈನಿಕರಿಗೆ ಸರ್ಕಾರಿ ಜಾಗ ಮಂಜೂರಾತಿ ಸಂಬಂಧಿಸಿದಂತೆ ಸರ್ಕಾರ ಮತ್ತು ಉಚ್ಚ ನ್ಯಾಯಾಲಯದಿಂದ ಆದೇಶವಿದೆ. ಆದರೆ, ಜಿಲ್ಲೆಯ ಸುಮಾರು ೫೦೦ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೇ ಬಾಕಿ ಉಳಿದಿದೆ. ಜತೆಗೆ ಕಂದಾಯ ಇಲಾಖೆಯಡಿಯಲ್ಲಿ ಭೂಮಿಯಿಲ್ಲ ಎಂಬ ಮಾತುಗಳು ಅಧಿಕಾರಿಗಳಿಂದ ಬರುತ್ತಿದೆ. ಆದ್ದರಿಂದ ವಿಲೇವಾರಿಯಾಗದ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ಜಿಲ್ಲಾಡಳಿತ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.


ಜಿಲ್ಲಾಧಿಕಾರಿಗಳು ಕಳೆದ ಮೂರು ತಿಂಗಳಿನಿಂದ ತಾಲೂಕು ಮಾಜಿ ಸೈನಿಕರ ಮತ್ತು ಅವರ ಅವಲಂಭಿತರ ಕುಂದುಕೊರತೆಗಳನ್ನು ಅದಾಲತ್ ಮುಖಾಂತರ ನಡೆಸುತ್ತಿದ್ದಾರೆ. ಇದು ಮಾಜಿ ಸೈನಿಕರ ಮತ್ತು ಅವರ ಅವಲಂಭಿತರಿಗೆ ಒಳ್ಳೆಯ ವಿಷಯ. ಅದೇ ರೀತಿ ಬಾಕಿ ಉಳಿದಿರುವ ತಾಲೂಕುಗಳಲ್ಲಿ ಅದಾಲತ್ ನಡೆಸುವಂತಾಗಬೇಕು. ಜತೆಗೆ ನಿವೇಶನವಿಲ್ಲದ ಮಾಜಿ ಸೈನಿಕರು ಮತ್ತು ವಿಧವೆಯವರಿಗೆ ಪಂಚಾಯಿತಿಯಲ್ಲಿ ನಿವೇಶನ ನೀಡುವಂತೆ ಸರ್ಕಾರದ ಆದೇಶವಿದ್ದರೂ ಈವರೆಗೆ ಒಂದು ಮನೆಯನ್ನು ಮಂಜೂರಾತಿ ಮಾಡಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಗೌರವ ಕಾರ್ಯದರ್ಶಿ ಹಾಗೂ ನಿವೃತ್ತ ಮೇಜರ್ ಓ.ಎಸ್.ಚಿಂಗಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಮಾಜಿ ಸೈನಿಕರು ವಿಧವೆಯವರು, ಸೈನಿಕರ ಅವಲಂಭಿತರು ವಾಸವಾಗಿದ್ದಾರೆ. ಮಾಜಿ ಸೈನಿಕರು ೧೫ ವರ್ಷದಿಂದ ೪೦ ವರ್ಷದವರೆಗೆ ಸೇವೆ ಸಲ್ಲಿಸಿ ಜಿಲ್ಲೆಗೆ ಬಂದು ನೆಲೆಸಿರುತ್ತಾರೆ. ಆದರೆ, ಸರ್ಕಾರಿ ಸವಲತ್ತುಗಳಿಂದ ವಂಚಿತರಾಗಿದ್ದೇವೆ ಎಂದು ಹೇಳಿದರು.


ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಮಾಜಿ ಸೈನಿಕರ ಸಂಘದ ಸದಸ್ಯರಾದ ಕೆ.ಡಿ.ಚಂದ್ರಪ್ಪ, ಬಿ.ಎನ್.ಗಂಗಾಧರ್, ಮಾದಪ್ಪ, ಕರ್ನಲ್ ಚಿಣ್ಣಪ್ಪ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net