ಜೋಡೋ ಯಾತ್ರೆಯಲ್ಲಿ ಮಾಜಿ ಯೋಧರ ಹೆಜ್ಜೆ

IMG-20221022-WA0017.jpg
Published on

ರಾಯಚೂರಿನಲ್ಲಿ ಮುಂದುವರಿದ ಭಾರತ ಐಕ್ಯತಾ ಯಾತ್ರೆ

ರಾಯಚೂರು: ಎಡೆದೊರೆ ನಾಡು ರಾಯಚೂರಿನಲ್ಲಿ ಭಾರತದ ಐಕ್ಯತಾ ಯಾತ್ರೆ ಮುಂದುವರಿದಿದೆ. ತಾಲೂಕಿನ ಯರಗೇರಾದಿಂದ ರಾಯಚೂರಿನತ್ತ ಸಾಗಿರುವ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಮಾಜಿ ಯೋಧರು ಹೆಜ್ಜೆಹಾಕುತ್ತಿದ್ದಾರೆ.
ಶನಿವಾರ ಬೆಳಗ್ಗೆ ಯರಗೇರಾದಿಂದ ಆರಂಭಗೊಂಡಿರುವ ಯಾತ್ರೆ ೧೬ ಕಿ.ಮೀ. ಕ್ರಮಿಸಿ ರಾಯಚೂರಿಗೆ ತಲಪಲಿದೆ. ಮಾರ್ಗ ಮಧ್ಯೆ ೧೫-೨೦ ಜನ ನಿವೃತ್ತ ಸೈನಿಕರು ಪಾದಯಾತ್ರೆಗೆ ಜೊತೆಯಾದರು. ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಮಾಜಿ ಯೋಧರ ಒನ್ ರ‍್ಯಾಂಕ್, ಒನ್ ಪೆನ್ಶನ್ ಬೇಡಿಕೆ ಮತ್ತಿತರೆ ವಿಷಯಗಳನ್ನು ರಾಹುಲ್ ಗಾಂಧಿ ಅವರೊಂದಿಗೆ ಹಂಚಿಕೊಂಡರು.
ಪಾದಯಾತ್ರೆಯುದ್ದಕ್ಕೂ ರಸ್ತೆಗಳ ಇಕ್ಕೆಲಗಳಲ್ಲಿ ನೆರೆದಿರುವ ಸಾರ್ವಜನಿಕರು ರಾಹುಲ್, ರಾಹುಲ್ ಎಂದು ಹರ್ಷೋದ್ಘಾರ ತೆಗೆದರೆ, ಜನರತ್ತ ರಾಹುಲ್ ಕೈ ಬೀಸುತ್ತಾ ಮುನ್ನಡೆದರು. ರೈತರು, ಕಾರ್ಮಿಕರು, ಗ್ರಾಮೀಣ ಮಹಿಳೆಯರು ರಾಹುಲ್ ಗಾಂಧಿಯನ್ನು ಭೇಟಿಯಾಗಿ, ಕೈಕುಲುಕಿ ಸಂಭ್ರಮಿಸಿದರು.
ಮಧ್ಯಾಹ್ನದ ವೇಳೆಗೆ ರಾಯಚೂರು ಹೊರವಲಯದ ಬೃಂದಾವನ್ ಹೊಟೆಲ್‌ಗೆ ಯಾತ್ರೆ ತಲುಪಿದ್ದು, ಅಲ್ಲಿ ಕೆಲ ಸಮಯ ವಿಶ್ರಾಂತಿ, ಮಧ್ಯಾಹ್ನದ ಭೋಜದನ ಬಳಿಕ ಸಂಜೆ ೪ ಗಂಟೆಗೆ ರಾಯಚೂರು ನಗರದಲ್ಲಿ ಪಾದಯಾತ್ರೆ ನಡೆಯಲಿದ್ದು, ಸಂಜೆ ೫.೩೦ಕ್ಕೆ ನಗರದಲ್ಲಿ ಬಹಿರಂಗ ಸಭೆ ಏರ್ಪಡಿಸಿದೆ. ರಾತ್ರಿ ಯರಮರಸ್ ನಲ್ಲಿ ವಾಸ್ತವ್ಯ ಮಾಡಲಿದ್ದಾರೆ.
ಯಾತ್ರೆಯಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ, ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರು, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಮಾಜಿ ಸಿಎಂ ಸಿದ್ದರಾಮಯ್ಯ, ರಾಯಚೂರು ಗ್ರಾಮೀಣ ಶಾಸಕ ದದ್ದಲ ಬಸನಗೌಡ, ಪಕ್ಷದ ಹಿರಿಯ ನಾಯಕರಾದ ಎಚ್.ಕೆ.ಪಾಟಿಲ್, ಬಿ.ಕೆ.ಹರಿಪ್ರಸಾದ, ಎನ್.ಎಸ್.ಬೋಸರಾಜು ಸೇರಿದಂತೆ ಅನೇಕರು ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net