ಯುದ್ಧಗಳಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಅಲ್ಮೇಡಾ ನಿಧನ

Published on

ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆ ಸ್ಥಾಪಿಸಿದ ಹೆಗ್ಗಳಿಕೆ

ಉಡುಪಿ: ತಾಲೂಕಿನ ಕೊಡವೂರು ಗ್ರಾಮ ಸಮೀಪದ ತೊಟ್ಟಂ ನಿವಾಸಿ, ಇಂಡಿಯನ್​ ಏರ್​ ಪೋರ್ಸ್​ನ ನಿವೃತ್ತ ಯೋಧ ಪಿ.ಜೆ.ಡಿ. ಅಲ್ಮೇಡಾ (93) ಜೂ.19ರಂದು ನಿಧನ ಹೊಂದಿದ್ದಾರೆ. ಅವರಿಗೆ ಪತ್ನಿ, ಐದು ಹೆಣ್ಣು ಮಕ್ಕಳು, ಓರ್ವ ಪುತ್ರ ಇದ್ದಾರೆ.

1931ರ ಮಾರ್ಚ್​ 22ರಂದು ಎಫ್. ಎಕ್ಸ್. ಡಿ. ಅಲ್ಮೇಡಾ ಮತ್ತು ತೆರೆಸಾ ಡಿಸೋಜಾ ದಂಪತಿ ಪುತ್ರರಾದ ಇವರು, ಉಡುಪಿ ತಾಲೂಕಿನ ಕೋಟೆ ಗ್ರಾಮದಲ್ಲಿ ಜನಿಸಿದ್ದರು. ಕಟಪಾಡಿಯ ಎಸ್​ವಿಎಚ್​ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದರು. ಬಳಿಕ 1956ರ ಮಾರ್ಚ್​ 25ರಂದು ಭಾರತೀಯ ವಾಯುಸೇನೆ ಸೇರ್ಪಡೆಯಾದರು.

UDP-21-4-YodhaDeath
ಪಿ.ಜೆ.ಡಿ. ಅಲ್ಮೇಡಾ.

3 ಯುದ್ಧದಲ್ಲಿ ಭಾಗಿ

ವಾಯುಸೇನೆಯ ಸೇವಾವಧಿಯಲ್ಲಿ 1961ರಲ್ಲಿ ನಡೆದ ಆಪರೇಷನ್​ ಗೋವಾ, 1962ರಲ್ಲಿ ನಡೆದ ಚೈನಾ ಆಗ್ರೇಷನ್​ ಮತ್ತು 1965ರಲ್ಲಿ ನಡೆದಿದ್ದ ಪಾಕ್​ ಯುದ್ಧದಲ್ಲಿ ಪಾಲ್ಗೊಂಡಿದ್ದರು.

ಮಾಜಿ ಸೈನಿಕರ ವೇದಿಕೆ ಸ್ಥಾಪನೆ

ಬೆಂಗಳೂರು, ಮದ್ರಾಸ್​, ಕಾನ್ಪುರ ಮತ್ತು ಜಮ್ಮು-ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ 1967 ಡಿಸೆಂಬರ್​ 26ರಂದು ನಿವೃತ್ತರಾಗಿದ್ದರು. ಬಳಿಕ ವಿವಿಧ ಖಾಸಗಿ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸಿದರು. ಎನ್​ಐಎಸ್​ ಕೋಚ್​ (ಅಥ್ಲೆಟಿಕ್ಸ್​), ಮಲ್ಪೆಯ ರಾಜ್​ ಫೀಶ್​ ಮೀಲ್​ನ ಮೆನೇಜರ್​ ಆಗಿಯೂ ನಿವೃತ್ತರಾಗಿದ್ದರು. ಉಡುಪಿಯಲ್ಲಿ ಮಾಜಿ ಸೈನಿಕರ ವೇದಿಕೆ ಸ್ಥಾಪಿಸಿದ ಹೆಗ್ಗಳಿಕೆ ಹೊಂದಿದ್ದು, ಸ್ಥಾಪಕಾಧ್ಯಕ್ಷರೂ ಆಗಿದ್ದರು. ವೇದಿಕೆ ವತಿಯಿಂದ 2018ರಲ್ಲಿ ಇವರನ್ನು ಸನ್ಮಾನಿಸಲಾಗಿತ್ತು. ಪ್ರಸ್ತುತ ಉಡುಪಿಯ ತೊಟ್ಟಂ ಎಂಬಲ್ಲಿ ತನ್ನ ಮಕ್ಕಳು, ಮೊಮ್ಮಕ್ಕಳೊಂದಿಗೆ ನೆಮ್ಮದಿಯ ಜೀವನ ನಡೆಸುತ್ತಿದ್ದರು.

UDP-21-4A-YodhaDeath
ವಾಯುಸೇನೆಯ ಸೇವಾ ಅವಧಿಯಲ್ಲಿ ಅಲ್ಮೇಡಾ ಅವರು ಗಳಿಸಿದ್ದ ಪದಕಗಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net