

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರದ ವೇಳೆ ಪರಿಶಿಷ್ಟ ಪಂಗಡಕ್ಕೆ ಸೇರಿದ ನಾಯಕ ಸಮುದಾಯವನ್ನು ಅವಮಾನಿಸಿದ ಮಾಜಿ ಸಂಸದ ರಮೇಶ ಕತ್ತಿ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಮೂಲಕ ಅವರನ್ನು ಬೆಳಗಾವಿ ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ವಿವಿಧ ದಲಿತ ಸಂಘಟನೆಗಳು ಆಗ್ರಹಿಸಿವೆ.
ಕತ್ತಿ ಹೇಳಿಕೆಯನ್ನು ಖಂಡಿಸಿ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಶನಿವಾರ ಸಮತಾ ಸೇನಾ ಕರ್ನಾಟಕ, ಮಹರ್ಷಿ ವಾಲ್ಮೀಕಿ ನಾಯಕ ಸಂಘ (ಧಾರವಾಡ) ಹಾಗೂ ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳದ ಸದಸ್ಯರು, ಕಾರ್ಯಕರ್ತರು ಪ್ರತಿಭಟವೆ ನಡೆಸಿದರು.
ಕತ್ತಿ ಹೇಳಿಕೆಯಿಂದ ಸಮುದಾಯದ ಜನರಿಗೆ ತೀವ್ರ ಅವಮಾನವಾಗಿದೆ. ಇದು ಕೇವಲ ಪರಿಶಿಷ್ಟ ಪಂಗಡದ ನಾಯಕ ವ ಬೇಡ ಕುಲಕ್ಕೆ ಮಾಡಿದ ಅಪಮಾನವಲ್ಲ.ಮರ್ಯಾದಾ ಪುರುಷೋತ್ತಮ ಶ್ರೀನಿಗೆ ಮಾಡಿದ ಅಪಮಾನವೆಂದೇ ಪರಿಗಣಿಸಬೇಕಾಗುತ್ತದೆ. ಇಂತಹ ಕ್ಷುಲ್ಲಕ ಮನಸ್ಥಿತಿಯ ಕತ್ತಿಯನ್ನು ಮಾಜಿ ಸಂಸದ ಎಂದು ಹೇಳಲು ನಾಚಿಕೆಯಾಗುತ್ತದೆ. ಅವರನ್ನು ಗಡಿಪಾರು ಮಾಡಿ ಆಸ್ತಿಪಾಸ್ತಿಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಆಗ್ರಹಿಸಲಾಗಿದೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಗುರುನಾಥ ಉಳ್ಳಿಕಾಶಿ, ಮಂಜುನಾಥ ಹುಡೇದ, ಪ್ರಕಾಶ ಕುರಹಟ್ಟಿ, ಮಾರುತಿ ಚಾಕಲಬ್ಬಿ, ಅಶೋಕ ವಾಲ್ಮೀಕಿ, ಹನುಮಂತ ತಳವಾರ, ವಿನಯ ಕ್ಯಾಸಕ್ಕಿ, ಚಂದ್ರು ನೂಲ್ವಿ, ಚನ್ನಪ್ಪ ಕಾಳೆ, ವಿವೇಕ ನಾಯಕ, ಅಡಿವೆಪ್ಪ ದೊಡ್ಡಮನಿ, ರಂಗಪ್ಪ ತಳವಾರ, ಶಿವಪ್ಪ ಮೆಣಸಿನಕಾಯಿ, ಪ್ರಶಾಂತ ವಾಲಿ, ಕವಿತಾ ನಾಯ್ಕರ, ಉಮಾ ನಾಯ್ಕರ, ವೀಣಾ ಬಿಳಗಿ, ರತ್ನವ್ವ ಅರಳಿಕಟ್ಟಿ, ಇತರರು ಇದ್ದರು.