ರಾಜ್ಯ ರಾಜಕಾರಣಕ್ಕೆ ಮುದ್ದಹನುಮೇಗೌಡ ; ಕುಣಿಗಲ್‌ನಿಂದ ಸ್ಪರ್ಧೆ ಘೋಷಣೆ ; ‘ಕೈ’ಟಿಕೆಟ್‌ಗೆ ಮಾಜಿ ಸಂಸದ ಪಟ್ಟು ; ಶಾಸಕ ರಂಗನಾಥ್ ನಡೆ ನಿಗೂಢ?

muddahanume gawda x mp 1
Published on

ತುಮಕೂರು : ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭವಿಷ್ಯದ ರಾಜಕೀಯ ನಡೆ ಬಹಿರಂಗವಾಗಿದ್ದು, ಜಿಲ್ಲಾ ರಾಜಕೀಯ ವಲಯದಲ್ಲಿ ಮೂಡಿದ್ದ ಕುತೂಹಲಕ್ಕೆ ತೆರೆಬಿದ್ದಿದೆ. ಮುಂಬರುವ ಚುನಾವಣೆಯಲ್ಲಿ ಕುಣಿಗಲ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಖಚಿತ ಎಂದು ಘೋಷಿಸುವ ಮೂಲಕ ಮುದ್ದಹನುಮೇಗೌಡ ವಿರೋಧಿಗಳಿಗೆ ಸಂದೇಶ ರವಾನಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಂಸದನಾಗಿ ನನ್ನ ಕ್ಷೇತ್ರದಲ್ಲಿ ಹಾಗೂ ಲೋಕಸಭೆಯಲ್ಲಿ ಸಾಕಷ್ಟು ಕ್ರಿಯಾಶೀಲನಾಗಿ ಕೆಲಸ ಮಾಡಿದ್ದರೂ ಚುನಾವಣೆಯಲ್ಲಿ ಕನಿಷ್ಠ ಸ್ಪರ್ಧಿಸಲು ಅವಕಾಶ ನೀಡದ ಪಕ್ಷದ ನಿರ್ಧಾರದ ಬಗ್ಗೆ ನೋವು ಇದ್ದೇ ಇದೆ. ಹಾಗಾಗಿ, ಭವಿಷ್ಯದ ರಾಜಕೀಯಕ್ಕಾಗಿ ರಾಜ್ಯ ರಾಜಕಾರಣಕ್ಕೆ ಮರಳಲು ನಿರ್ಧರಿಸಿದ್ದೇನೆ ಎಂದು ಖಚಿತಪಡಿಸಿದರು.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ತುಮಕೂರಿನಲ್ಲಿ ಸಭೆ ನಡೆಸಿದಾಗ ಕುಣಿಗಲ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಯಸಿದ್ದು ಟಿಕೆಟ್ ನೀಡಬೇಕು ಎಂದು ಮನವಿ ಮಾಡಿದ್ದೇನೆ, ಎರಡು ಬಾರಿ ಇದೇ ಕ್ಷೇತ್ರದಿಂದ ವಿಧಾನಸಭಾ ಸದಸ್ಯನಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನಾನು ಹಾಲಿ ಸಂಸತ್ ಸದಸ್ಯನಾಗಿದ್ದಾಗಲೇ ಸ್ಪರ್ಧೆಗೆ ಅವಕಾಶ ನೀಡದೆ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಬೆಂಬಲ ಸೂಚಿಸಿದರು. ಆ ಸಂದರ್ಭದಲ್ಲಿ ಪಕ್ಷಕ್ಕಾಗಿ ನಾನು ತ್ಯಾಗ ಮಾಡಿದ್ದೇನೆ. ಹಾಗಾಗಿ, ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಸದಸ್ಯರಿದ್ದರೂ ನನಗೆ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದರು.

ಹಾಲಿ ಶಾಸಕರಿದ್ದರೂ ಟಿಕೆಟ್ ಬಯಸಿದ ಮಾಜಿ ಸಂಸದ ! : ಕುಣಿಗಲ್ ಕ್ಷೇತ್ರದಲ್ಲಿ ಹಾಲಿ ಶಾಸಕ ಡಾ.ಎಚ್.ಡಿ.ರಂಗನಾಥ್ ಕಾಂಗ್ರೆಸ್‌ನಿಂದಲೇ ಗೆದ್ದಿದ್ದರೂ ಅದೇ ಕ್ಷೇತ್ರದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಎಸ್.ಪಿ.ಮುದ್ದಹನುಮೇಗೌಡ ಟಿಕೆಟ್ ಕೇಳಲಾರಂಭಿಸಿರುವುದು ಕುತೂಹಲ ಮೂಡಿಸಿದೆ. ಹಾಲಿ ಶಾಸಕರು ಮುಂಬರುವ ಚುನಾವಣೆಯಲ್ಲಿ ಕ್ಷೇತ್ರ ಬದಲಾವಣೆ ಮಾಡಿದರಷ್ಟೇ ಎಸ್‌ಪಿಎಂಗೆ ಕಾಂಗ್ರೆಸ್ ಟಿಕೆಟ್ ಸಾಧ್ಯ ಎಂಬ ಮಾತು ಕಾಂಗ್ರೆಸ್ ವಲಯದಲ್ಲಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಂಬಂಧಿಯೂ ಆಗಿರುವ ಡಾ.ಎಚ್.ಡಿ.ರಂಗನಾಥ್‌ಗೆ ಟಿಕೆಟ್ ತಪ್ಪಿಸುವುದು ಸುಲಭವಲ್ಲ ಎಂಬ ಅರಿವು ಹಿರಿಯ ಮುಖಂಡರಾಗಿರುವ ಮುದ್ದಹನುಮೇಗೌಡರಿಗೆ ಇಲ್ಲ ಎನ್ನುವಂತಿಲ್ಲ. ಆದರೂ ಸ್ಪರ್ಧೆ ಖಚಿತ ಎಂಬ ಸಂದೇಶ ರವಾನಿಸಿರುವುದು ಕಾಂಗ್ರೆಸ್ ಪಾಳಯದಲ್ಲಿ ನಡುಕ ಹುಟ್ಟಿಸಿರುವುದು ಸುಳ್ಳಲ್ಲ. ಕಾಂಗ್ರೆಸ್ ಮತ್ತೆ ಅನ್ಯಾಯ ಮಾಡಿದರೆ ಮುದ್ದಹನುಮೇಗೌಡ ಬಿಜೆಪಿಯಿಂದಲೂ ಸ್ಪರ್ಧೆಗಿಳಿಯುವ ಸಾಧ್ಯತೆಯಿದ್ದು ಜಿಲ್ಲೆಯಲ್ಲಿ ರಾಜಕೀಯ ಚಿತ್ರಣವೇ ಬದಲಾಗಬಹುದು. ಪಕ್ಷಾಂತರದ ಬಗ್ಗೆ ಗುಟ್ಟುಬಿಟ್ಟುಕೊಡದ ಎಸ್‌ಪಿಎಂ ರಾಜ್ಯ ರಾಜಕಾರಣಕ್ಕೆ ವಾಪಸಾಗುವುದು ಖಚಿತವಾಗಿದೆ.

ಎಂಪಿ ಟಿಕೆಟ್ ಕೈತಪ್ಪಿದಾಗ ಖುದ್ದು ರಾಹುಲ್‌ಗಾಂಧಿ ಅವರೇ ರಾಜ್ಯಸಭೆಗೆ ಆಯ್ಕೆ ಮಾಡುವ ಭರವಸೆ ನೀಡಿದ್ದರು, ರಾಜ್ಯಸಭೆ, ವಿಧಾನ ಪರಿಷತ್ ಆಯ್ಕೆಗೆ ಅವಕಾಶವಿದ್ದರೂ ಮತ್ತೆ ನನಗೆ ತಪ್ಪಿಸಲಾಯಿತು. ಕುಣಿಗಲ್ ಕ್ಷೇತ್ರದ ಜನರು ವಿಧಾನಸಭೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದು ನಾನೂ ಸ್ಪರ್ಧೆಗೆ ಮನಸ್ಸು ಮಾಡಿದ್ದೇನೆ, ಕಾಂಗ್ರೆಸ್‌ನಿಂದಲೇ ಟಿಕೆಟ್ ಸಿಗಲಿದೆ. ಎಸ್.ಪಿ.ಮುದ್ದಹನುಮೇಗೌಡ, ಮಾಜಿ ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net