ವಿವಾದಿತ ನಿವೇಶನಗಳನ್ನು ಹಿಂತಿರುಗಿಸಲು ಮುಖ್ಯಮಂತ್ರಿಗೆ ಮಾಜಿ ಎಂಎಲ್ ಸಿ ಬಹಿರಂಗ ಪತ್ರ

D. Madegowda
Published on

ಮೈಸೂರು: ನಿಮ್ಮ ಪತ್ನಿ ಹೆಸರಿನಲ್ಲಿ ಪಡೆದುಕೊಂಡಿರುವ ನಿವೇಶನಗಳನ್ನು ವಾಪಸ್ ನೀಡುವುದರೊಂದಿಗೆ ಮುಡಾ ಸೇರಿದಮತೆ ಎಲ್ಲ ಪ್ರಾಧಿಕಾರಗಳನ್ನು ಶುದ್ಧೀಕರಿಸುವಂತೆ ಮೈಸೂರು ನಗರ ವಿಶ್ವಸ್ಥ ಮಂಡಳಿ(ಮುಡಾ) ಮಾಜಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ನಿಮ್ಮ ಹೆಸರಿಗೆ ಕಳಂಕ ಅಂಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಕೊಳೆ ತೊಳೆವ ಕೆಲಸ ಮಾಡಿ. ಅಲ್ಲದೇ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸೇರಿದಂತೆ ರಾಜ್ಯದ ಎಲ್ಲ ಪ್ರಾಧಿಕಾರಗಳನ್ನು ಶುದ್ಧೀಕರಿಸಿ ನಿವೇಶನಕ್ಕಾಗಿ ಕಾಯುತ್ತಿರುವ ಜನರಿಗೆ ನಿವೇಶನ ಹಂಚಿಕೆ ಮಾಡಿ ಎಂದು ಸಲಹೆ ನೀಡಿದ್ದಾರೆ.
ತಮ್ಮ ರಾಜಕೀಯ ಜೀವನದಲ್ಲಿ ಎಲ್ಲಿಯೂ ಕಾಣಿಸಿಕೊಳ್ಳದ ನಿಮ್ಮ ಪತ್ನಿ ಪಾರ್ವತಿ ಅವರ ಹೆಸರು ಈ ಪ್ರಕರಣದಲ್ಲಿ ತಳಕು ಹಾಕಿಕೊಂಡಿರುವುದು ಬೇಸರ ತಂದಿದೆ. ನಿಮ್ಮ ಪತ್ನಿ ಮೇಲೆ ಕಿಂಚಿತ್ತು ಕಾಳಜಿ ಇದ್ದಿದ್ದರೆ, 14 ನಿವೇಶನಗಳನ್ನು ಮುಡಾಕ್ಕೆ ಹಿಂತಿರುಗಿಸಿ ಆರೋಪ ಮುಕ್ತರಾಗುತ್ತಿದ್ದಿರಿ. ಆಗ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಸನ್ನಿವೇಶ ಸೃಷ್ಟಿಯಾಗುತ್ತಿರಲಿಲ್ಲ ಎಂದಿದ್ದಾರೆ.
ಈಗ ರಾಜ್ಯಪಾಲರ ನಿರ್ಣಯದ ವಿರುದ್ಧ ನ್ಯಾಯಾಲಯದ ಮೊರೆ ಹೋಗುವ ಸಂದರ್ಭವೂ ಉದ್ಭವಿಸುತ್ತಿರಲಿಲ್ಲ. ಆದರೆ ನೀವು ಮುಡಾ ಪ್ರಕರಣವನ್ನು ಸಮರ್ಥಿಸಿಕೊಂಡು ಈಗ ಕಾನೂನಿನ ಕುಣಿಕೆಗೆ ಸಿಲುಕಿದ್ದಲ್ಲದೆ, ಏನೂ ಅರಿಯದ ಪತ್ನಿ ಪಾರ್ವತಿಯನ್ನೂ ಕಾನೂನಿನ ಕಟಕಟೆಗೆ ದೂಡಿದ್ದೀರಿ. ಇದು ನಿಮ್ಮ ಆತ್ಮಸಾಕ್ಷಿಗಾದರೂ ಸರಿ ಅನ್ನಿಸುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಬಡ ಜನರಿಗಾಗಿ ನೀವು ತಂದಿರುವ ಹಲವು ಭಾಗ್ಯ ಯೋಜನೆಗಳು ಸಾಕಷ್ಟು ಅನುಕೂಲವಾಗಿದ್ದರೂ ಅದನ್ನು ಮರೆತು ಬಿಡುತ್ತಾರೆ. ಆದ್ದರಿಂದ ಭಾಗ್ಯಗಳಿಗಿಂತ ಮನೆ, ನಿವೇಶನದ ಭಾಗ್ಯ ನೀಡಿದರೆ ಜನರು ತಲತಲಾಂತರವಾದರೂ ನೆನಪು ಮಾಡಿಕೊಳ್ಳುತ್ತಾರೆ. ಇದಕ್ಕೆ ವಿಶ್ವಸ್ಥ ಮಂಡಳಿ (ಮುಡಾ) ಅಧ್ಯಕ್ಷನಾಗಿದ್ದಾಗ ನಾನು ಹಂಚಿಕೆ ಮಾಡಿದ ಮನೆಗಳೇ ಸಾಕ್ಷಿ. ಇದರಿಂದ ಈಗಲೂ ಜನರು ನನ್ನನ್ನು ಮನೆ, ಮನೆ ಮಾದೇಗೌಡ ಎಂದೇ ಜನ ಗುರುತಿಸುತ್ತಾರೆ ಎಂದಿದ್ದಾರೆ.
ನಿಮ್ಮಿಬ್ಬರ ಸಮಾವೇಶದಿಂದ ನಿವೇಶನ ಬಯಸಿ ದಶಕಗಳಿಂದ ಕಾಯುತ್ತಿರುವ 84 ಸಾವಿರ ನಿವೇಶನಾಕಾಂಕ್ಷಿಗಳಿಗೂ ಯಾವುದೇ ಪ್ರಯೋಜನವಾಗಲಿಲ್ಲ. ಬದಲಿಗೆ ಶಾಮಿಯಾನ ಹಾಕಿದವರು, ಸಮಾವೇಶಕ್ಕೆ ಕರೆತಂದ ಬಾಡಿಗೆ ವಾಹನ ಮಾಲೀಕರು ಹಾಗೂ ಬಾಡಿಗೆ ಜನರಿಗೆ ಮಾತ್ರ ಅನುಕೂಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಮೈಸೂರಿನಲ್ಲಿ ನನ್ನ ಅವಧಿಯಲ್ಲಿ ಅತ್ಯಂತ ಕಡಿಮೆ ಬೆಲೆಗೆ ನಿವೇಶನ, ಮನೆ ನೀಡಲು ಜಾರಿಗೊಂಡ ಆಶಾಮಂದಿರ ಯೋಜನೆಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಲು ಅಂದಿನ ನಗರಾಭಿವೃದ್ಧಿ ಸಚಿವರಾಗಿದ್ದ ಎಂ.ಚಂದ್ರಶೇಖರ್ ಶಿವಮೊಗ್ಗದಲ್ಲಿ ಸಮಾವೇಶವನ್ನು ಮಾಡಿದರು. ಆದರೆ ಸರ್ಕಾರ ಬಿದ್ದು ಹೋಗಿದ್ದರಿಂದ ಆ ಯೋಜನೆ ನನೆಗುದಿಗೆ ಬಿದ್ದಿದೆ. ಹಾಗಾಗಿ ತಮ್ಮ ಕೊನೆ ಅಧಿಕಾರವಧಿಯಲ್ಲಾದರೂ ಈ ಯೋಜನೆ ಜಾರಿಗೊಳಿಸಿ ಮನೆ ನೀಡಿದರೆ ಜನರು ನಿಮ್ಮನ್ನು ಡಿ.ದೇವರಾಜ ಅರಸು ಅವರಂತೆ ಸದಾ ನೆನಪು ಮಾಡಿಕೊಳ್ಳುತ್ತಾರೆ ಎಂದು ಸಲಹೆ ನೀಡಿದ್ದಾರೆ.

ಪಾದಯಾತ್ರೆ, ಸಮಾವೇಶದಿಂದ ಏನು ಪ್ರಯೋಜನವಾಗಿಲ್ಲ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ಮಾಡಿದರು. ಇದಕ್ಕೆ ಪ್ರತ್ಯುತ್ತರ ನೀಡಲು ನೀವು ವೀರಾವೇಶದಿಂದ ಸಮಾವೇಶ ಮಾಡಿ ವೀರಾವೇಶದ ಮಾತಾಡಿದಿರಿ. ಮರುದಿನ ವಿಪಕ್ಷಗಳು ಸಹ ಅದೇ ಮಹಾರಾಜ ಕಾಲೇಜು ಮೈದಾನದಲ್ಲಿ ಮುಡಾ ಹಗರಣದ ಬಗ್ಗೆ ಮಾತಾಡಿದರು. ನೀವೆಲ್ಲ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿದ್ದರಿಂದ ಮುಡಾ ಸಮಸ್ಯೆ ಏನೂ ಬಗೆಹರಿಯಲಿಲ್ಲ.
ಡಿ. ಮಾದೇಗೌಡ, ಮಾಜಿ ಎಂಎಲ್‌ಸಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net