

ತುಮಕೂರು: ವಿಧಾನಪರಿಷತ್ಗೆ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ನನ್ನನ್ನು ತಂತ್ರಗಾರಿಕೆಯಿಂದಲ್ಲ ಕುತಂತ್ರದಿಂದ ಸೋಲಿಸಲಾಗಿದೆ ಎಂದು ಮಾಜಿ ಎಂಎಲ್ಸಿ ವೈ.ಎ.ನಾರಾಯಣಸ್ವಾಮಿ ಬಹಿರಂಗ ಪಡಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕ್ಷೇತ್ರದಲ್ಲಿ ಮೂರು ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಿದ ತೃಪ್ತಿಯಿದೆ. ಆದರೆ ಈ ಬಾರಿ ನನ್ನನ್ನು ವಾಮಮಾರ್ಗದಿಂದ ಸೋಲಿಸಲಾಯಿತು. ಈ ಸೋಲು ಕೆಲಸಕ್ಕೆ ಸಿಗಬೇಕಾದ ಮನ್ನಣೆ ಸಿಗಲಿಲ್ಲವೆಂಬ ನೋವು ಇದೆ ಎಂದರು.
ಸೋತಿದ್ದರೂ ಶಿಕ್ಷಕರ ಧ್ವನಿಯಾಗಿ ಕೆಲಸ ಮಾಡುತ್ತೇನೆ. ಅವರ ಸಮಸ್ಯೆಗಳಿಗೆ ಸ್ಪಂದಿಸಿ ಶಿಕ್ಷಕರ ಪರ ಹೋರಾಟಗಳಲ್ಲಿ ಭಾಗಿಯಾಗುತ್ತೇನೆ. ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಮತ್ತೆ ಪುಟಿದೆದ್ದು ಬರುತ್ತೇನೆ, ನಮ್ಮ ಪಕ್ಷದ ಬೆಂಬಲವೂ ನನಗಿದೆ. ಸೋಲಿನಿಂದ ಹತಾಶನಾಗಿಲ್ಲ. ಗೆದ್ದಿರುವ ಅಭ್ಯರ್ಥಿಗೆ ಶುಭಾಶಯ ಕೋರಿ ಅವರು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಈಡೇರಿಸಲಿ ಎಂದು ಹೇಳಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂದೀಪ್ಗೌಡ ಹಾಜರಿದ್ದರು