

ಕಲಬುರಗಿ: ವಿಧಾನಪರಿಷತ್ ಮಾಜಿ ಸದಸ್ಯ, ಕರ್ನಾಟಕ ಪೀಪಲ್ಸ್ ಎಜುಕೇಶನ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯಾಗಿದ್ದ ಮಾರುತಿರಾವ್ ಡಿ. ಮಾಲೆ (84) ಮಂಗಳವಾರ ನಿಧನ ಹೊಂದಿದರು.
ಅವರಿಗೆ ಪುತ್ರ, ಪುತ್ರಿ ಇದ್ದಾರೆ. ಕಲಬುರಗಿ ತಾಲೂಕಿನ ಹಡಗಿಲ್ ಹಾರುತಿ ಗ್ರಾಮದಲ್ಲಿರುವ ಸ್ವಂತ ಜಮೀನಿನಲ್ಲಿ ಬುಧವಾರ ಸಂಜೆ 4ಕ್ಕೆ ಅಂತ್ಯಕ್ರಿಯೆ ನಡೆಯಲಿದೆ. ನಗರದ ಶಾಂತಿ ನಗರದ ಮನೆಯಲ್ಲಿ ಬುಧವಾರ ಬೆಳಿಗ್ಗೆಯಿಂದ ಸಂಜೆವರೆಗೆ ಅಂತಿಮ ದರ್ಶನಕ್ಕೆ ಇಡಲಾಗಿದೆ.
ದಲಿತ ನಾಯಕ ಬಿ. ಶಾಮಸುಂದರ ಪ್ರಭಾವದಿಂದ ಸರ್ಕಾರದ ವಾರ್ಡನ್ ಹುದ್ದೆಗೆ ರಾಜೀನಾಮೆ ನೀಡಿ, ದಲಿತ ಚಳವಳಿಯಲ್ಲಿ ಸಕ್ರೀಯರಾಗಿದ್ದರು. ಭೀಮಸೇನೆಯ ಖಜಾಂಚಿಯಾಗಿದ್ದರು.
ಮೂಲತಃ ಬೀದರ್ ಜಿಲ್ಲೆಯ ಘಾಟಬೋರಾಳ ಗ್ರಾಮದ ಮಾಲೆ ಅವರು ಹೈದರಾಬಾದ್ ನಿಜಾಮನ ಖಾಸಗಿ ಸೈನ್ಯ ರಜಾಕಾರರ ವಿರುದ್ಧ ಹೋರಾಟ ಮಾಡಿದ್ದರು.