

ಮೈಸೂರು: ಕಾಂಗ್ರೆಸ್ ಮುಖಂಡ, ಮಾಜಿ ಶಾಸಕ ವಾಸು ಭಾನುವಾರ ಸಂಜೆ ಪಂಚಭೂತಗಳಲ್ಲಿ ಲೀನವಾದರು. ಶನಿವಾರ ನಿಧನರಾಗಿದ್ದ ಅವರ ಅಂತಿಮ ದರ್ಶನ ಬಳಿಕ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.
ಮೈಸೂರು-ಬನ್ನೂರು ರಸ್ತೆಯಲ್ಲಿರುವ ವಾಸು ಮಾಲೀಕತ್ವದ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ಒಕ್ಕಲಿಗ ಸಮುದಾಯದ ಸಂಪ್ರದಾಯದಂತೆ ಅಂತ್ಯಕ್ರಿಯೆ ನಡೆಯಿತು.
ಅವರ ಹಿರಿಯ ಮಗ ಕವೀಶ್‌ಗೌಡ ಅವರು ಚಿತೆಗೆ ಅಗ್ನಿ ಸ್ಪರ್ಶ ಮಾಡಿ ಅಂತಿಮ ವಿಧಿವಿಧಾನ ಪೂರ್ಣಗೊಳಿಸಿದರು. ಅವರ ಪತ್ನಿ ಲಲಿತಾ ವಿ.ಗೌಡ ಅವರ ಸಮಾಧಿ ಪಕ್ಕದ ಜಾಗದಲ್ಲೇ ವಾಸು ಅವರನ್ನು ಚಿತೆಗೇರಿಸಲಾಯಿತು.
ವಾಸು ಅವರ ಮತ್ತಿಬ್ಬರು ಮಕ್ಕಳಾದ ಅವೀಶ್‌ಗೌಡ, ರಿತೇಶ್‌ಗೌಡ, ಸೊಸೆಯಂದಿರು, ಕುಟುಂಬಸ್ಥರು ಪೂಜಾ ಕಾರ್ಯ ನಡೆಸಿದರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ, ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ ಸೇರಿದಂತೆ ವಿವಿಧ ಕ್ಷೇತ್ರಗಳ ಪ್ರಮುಖರು, ಆಪ್ತವಲಯದ ಸ್ನೇಹಿತರು ಪಾಲ್ಗೊಂಡಿದ್ದರು.
ಜಯಲಕ್ಷ್ಮೀಪುರಂ ಅವರ ಮನೆಯ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತು. ಸಾರ್ವಜನಿಕರು, ರಾಜಕೀಯ ಮುಖಂಡರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಂತಿಮ ನಮನ ಸಲ್ಲಿಸಿದರು.
ಮಧ್ಯಾಹ್ನ 12.30ರ ಸುಮಾರಿಗೆ ಮನೆಯ ಆವರಣದಲ್ಲಿ ಅಂತಿಮ ವಿಧಿವಿಧಾನಗಳು ಪ್ರಾರಂಭಿಸಲಾಯಿತು. ಅವರ ಕುಟುಂಬಸ್ಥರು ಪೂಜೆ ಸಲ್ಲಿಸಿದರು. 2.30ಗಂಟೆ ವಿಶೇಷವಾಗಿ ಸಿದ್ಧಪಡಿಸಿದ ಅಂತಿಮಯಾತ್ರೆಯ ವಾಹನದಲ್ಲಿ ವಾಸು ಪಾರ್ಥಿವ ಶರೀರ ಇರಿಸಲಾಯಿತು. ನಂತರ ಯಾತ್ರಾ ವಾಹನವು ಟೆಂಪಲ್ ರಸ್ತೆಯಿಂದ ಪಡುವಾರಹಳ್ಳಿ ಮುಖ್ಯ ರಸ್ತೆ ಮೂಲಕ ಸಾಗಿ ಕಾಂಗ್ರೆಸ್ ಕಚೇರಿಗೆ ತರಲಾಯಿತು. ಕಾಂಗ್ರೆಸ್ ಭವನ ಕಚೇರಿಯಲ್ಲಿ ನೆರೆದಿದ್ದ ಕಾರ್ಯಕರ್ತರು ಮತ್ತು ಮುಖಂಡರು, ಪ್ರಾರ್ಥಿವ ಶರೀರಕ್ಕೆ ಧ್ವಜ ವಂದನೆ ಸಲ್ಲಿಸಿದರು. ಬಳಿಕ ಅಂತ್ಯಸಂಸ್ಕಾರ ನಡೆಯುವ ಸ್ಥಳಕ್ಕೆ ತೆರೆದ ವಾಹನದ ಮೂಲಕ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು.
ಮಾಜಿ ಶಾಸಕ ವಾಸು ಅವರ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು ಕೇಂದ್ರದ ಮಾಜಿ ಸಚಿವರು, ಮಾಜಿ ಮತ್ತು ಹಾಲಿ ಶಾಸಕರು, ನಿಗಮ ಮಂಡಳಿಯ ನಿರ್ದೇಶಕರು ಮತ್ತು ರೈತ ಮುಖಂಡರು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಪಡೆದುಕೊಂಡರು.
ಮಾಜಿ ಕೇಂದ್ರ ಸಚಿವ ವೀರಪ್ಪಮೊಯ್ಲಿ, ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ಜಿ.ಟಿ.ದೇವೇಗೌಡ, ಜಿ.ಟಿ.ಹರೀಶ್‌ಗೌಡ, ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ, ಮುಡಾ ಅಧ್ಯಕ್ಷ ಕೆ.ಮರಿಗೌಡ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್‌ಖಾನ್, ಮಾಜಿ ಸಚಿವ ಕೋಟೆ ಎಂ.ಶಿವಣ್ಣ, ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್, ನಟರಾದ ಅನೂಪ್ ಭಂಡಾರಿ, ನಿರೂಪ್ ಭಂಡಾರಿ ಅಂತಿಮ ನಮನ ಸಲ್ಲಿಸಿ, ಕುಟಂಬಸ್ಥರಿಗೆ ಸಾಂತ್ವನ ಹೇಳಿದರು.
ವಾಸು ಅವರನ್ನು ಕಳೆದುಕೊಂಡಿರುವುದು ನನ್ನ ಒಬ್ಬ ಸಹೋದರನನ್ನು ಕಳೆದುಕೊಂಡಷ್ಟು ನೋವಾಗಿದೆ ಎಂದು ಕೇಂದ್ರದ ಮಾಜಿ ಸಚಿವ ವೀರಪ್ಪ ಮೊಯ್ಲಿ ದುಃಖ ವ್ಯಕ್ತಪಡಿಸಿದರು.
ನನ್ನ ಅವರ ನಡುವೆ ಕಳೆದ 45 ವರ್ಷಗಳಿಂದ ಉತ್ತಮ ಒಡನಾಟ ಇತ್ತು. ನಾನು ಸಣ್ಣ ಕೈಗಾರಿಕೆ ಸಚಿವನಾಗಿದ್ದಾಗ ವಾಸು ಪರಿಚಯವಾಯಿತು. ಅವರ ಒಳ್ಳೆಯ ವ್ಯಕ್ತಿತ್ವವನ್ನು ನೋಡಿ ರಾಜಕೀಯ ಕಾರ್ಯದರ್ಶಿಯಾಗಿ ಮಾಡಿಕೊಂಡಿದ್ದೆ ಎಂದು ಸ್ಮರಿಸಿದರು. ವಾಸು ಮೈಸೂರು ಮೇಯರ್, ಶಾಸಕರಾಗಿ ಹಲವಾರು ಜನಪರ ಕೆಲಸ ಮಾಡಿದ್ದಾರೆ. ಚಾಮರಾಜ ಕ್ಷೇತ್ರದ ಶಾಸಕರಾಗಿ ಜಯದೇವ ಆಸ್ಪತ್ರೆದೊಂದಿಗೆ ಅನೇಕ ಅಭಿವೃದ್ಧಿ ಕಾರ್ಯವನ್ನು ಮಾಡಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದರು. ವಾಸು ಒಬ್ಬ ಸೈದ್ಧಾಂತಿಕ ನಿಲುವನ್ನು ಕಟ್ಟಿಕೊಂಡಿದ್ದ ರಾಜಕಾರಣಿ ಆಗಿದ್ದರು ಎಂದು ಹೇಳಿದರು.