ಶಾಸಕರಿಂದಲೇ ಭ್ರಷ್ಟಾಚಾರ ಪೋಷಣೆ -  ಸಂಜೀವ ಮಠಂದೂರು ಗಂಭೀರ ಆರೋಪ

Published on

ಪುತ್ತೂರು: ಶಾಸಕರಿಂದ ತಾಳಕ್ಕೆ ತಕ್ಕಂತೆ ಕುಣಿಯುವ ಅಧಿಕಾರಿಗಳನ್ನು ನೇಮಿಸಿ ಭ್ರಷ್ಟಾಚಾರ ಪೋಷಣೆ ಮಾಡುವ ಕಾರ್ಯವಾಗುತ್ತಿದೆ. ಅಭಿವೃದ್ಧಿಯಲ್ಲಿ ಸುದ್ದಿ ಮಾಡಬೇಕಾಗಿದ್ದ ಪುತ್ತೂರು ಲಂಚಾವತಾರದಲ್ಲಿ ಸುದ್ದಿ ಮಾಡುತ್ತಿದೆ. ಪುತ್ತೂರಿನ ಆಡಳಿತ ಸೌಧಕ್ಕೆ ಲೋಕಾಯುಕ್ತ ದಾಳಿಯಾದಾಗ ತಹಸೀಲ್ದಾರ್ ಪರಾರಿಯಾಗಿದ್ದು, ಪುತ್ತೂರಿನ ಇತಿಹಾಸದಲ್ಲಿ ಪ್ರಥಮ ಬಾರಿ ಎಂದು ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.

ಪುತ್ತೂರಿನ ಶಾಸಕರು ಚುನಾವಣೆಯಲ್ಲಿ ಗೆದ್ದ ತಕ್ಷಣ ಭ್ರಷ್ಟಾಚಾರ ಬಿಜೆಪಿಯವರು ಮಾಡಿದ್ದಾರೆ. ಅಕ್ರಮ-ಸಕ್ರಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದಾಗ ಜನ ನಂಬಿದ್ದರು. ಆದರೆ ಪುತ್ತೂರಿಗೆ ಲೋಕಾಯುಕ್ತ ಟ್ರಾಪ್‌ನಲ್ಲಿ ಜೈಲು ಶಿಕ್ಷೆ ಅನುಭವಿಸಿ ಬಂದ ಹಿಂದಿನ ತಹಸೀಲ್ದಾರ್ ಅಕ್ರಮ-ಸಕ್ರಮ, ೯೪ ಸಿ, ಸಿಸಿ ಮಂಜೂರಾತಿ ಮಾಡುವಾಗ ಎಷ್ಟು ನ್ಯಾಯ ಕೊಟ್ಟಿರಬಹುದು ಎಂಬುದನ್ನು ಜನ ಯೋಚಿಸುತ್ತಾರೆ. ತಾಲೂಕು ಕಚೇರಿಯಲ್ಲಿ ಅಕ್ರಮ-ಸಕ್ರಮದ ಎನ್‌ಒಸಿಗೆ ಲಂಚ ಪಡೆಯುತ್ತಿರುವಾಗ ಅಕ್ರಮ- ಸಕ್ರಮ ಅರ್ಜಿ ವಿಲೇವಾರಿಯಲ್ಲಿ ಎಷ್ಟು ದುಡ್ಡು ತೆಗೆದು ಕೊಂಡಿರಲಿಕ್ಕಿಲ್ಲ ಎಂದು ಮಾತನಾಡುತ್ತಿದ್ದಾರೆ. ಆ ನಿಕಟಪೂರ್ವ ತಹಸೀಲ್ದಾರ್ ಅವಧಿಯಲ್ಲಿ ಆದ ಎಲ್ಲಾ ಅಕ್ರಮ-ಸಕ್ರಮ ಮಂಜೂರಾತಿಯನ್ನು ಲೋಕಾಯುಕ್ತ ತನಿಖೆ ಮಾಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಶಶಿಧರ್ ನಾಯಕ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net