ಮರಳಿ ಗೂಡಿಗೆ ಚಿಂತಾಮಣಿ ಸುಧಾಕರ್ ; ಕೆಪಿಸಿಸಿ ಅಧ್ಯಕ್ಷರ ನಿವಾಸದಲ್ಲಿ ಮಾಜಿ ಶಾಸಕರ ಚರ್ಚೆ

12 cmy 2
Published on

ಚಿಂತಾಮಣಿ : ಜಿಪಂ, ತಾಪಂ ಚುನಾವಣೆ ಸಿದ್ಧತೆಗಳು ನಡೆಯುತ್ತಿರುವ ಬೆನ್ನಲ್ಲೆ ತಾಲೂಕಿನಲ್ಲಿ ರಾಜಕೀಯ ಚಿತ್ರಣ ಬದಲಾಗುತ್ತಿದೆ. ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಮರಳಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ನಿಜವಾಗುತ್ತಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿಯಾಗಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಬೆಂಗಳೂರಿನ ಸದಾಶಿವನಗರದ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಭಾನುವಾರ ಮಾಜಿ ಸಚಿವೆ ಉಮಾಶ್ರೀ, ಗೌರಿಬಿದನೂರು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹಾಗೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ ಸಮ್ಮುಖದಲ್ಲಿ ಮಾಜಿ ಶಾಸಕರೊಂದಿಗೆ ಚರ್ಚಿಸಿರುವುದು ಚಿಂತಾಮಣಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಗಳಿಗೆ ಕಾರಣವಾಗುವ ಸೂಚನೆಗಳು ಸಿಕ್ಕಿವೆ.

ಈಗಾಗಲೇ ಡಾ ಎಂ.ಸಿ.ಸುಧಾಕರ್ ಮಾತೃಪಕ್ಷಕ್ಕೆ ಮರಳುವುದು ಖಚಿತವಾಗಿದೆಯಾದರೂ ಬೆಂಬಲಿಗರು, ಮುಖಂಡರೊಂದಿಗೆ ಚರ್ಚಿಸಿದ ಬಳಿಕ ಸೂಕ್ತ ನಿರ್ಧಾರ ಘೋಷಿಸುವ ಇಂಗಿತ ಹೊಂದಿದ್ದಾರೆ ಎನ್ನಲಾಗಿದ್ದು, ಕ್ಷೇತ್ರದಲ್ಲಿ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿದೆ.

ಪಕ್ಷದ ಸದಸ್ಯತ್ವಕ್ಕೆ ಯಾರೇ ಅರ್ಜಿ ಸಲ್ಲಿಸಿದರೂ, ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಬರುವವರಿಗೆ ಕಾಂಗ್ರೆಸ್‌ನ ಬಾಗಿಲು ಸದಾ ತೆರೆದಿರುತ್ತದೆ ಎಂದಿರುವ ಡಿ.ಕೆ.ಶಿವಕುಮಾರ್, ಈ ಹಿಂದೆ ಪಕ್ಷದ ಸಂಘಟನೆಗೆ ಶ್ರಮಿಸಿ, ನಾನಾ ಕಾರಣಗಳಿಂದ ಹೊರ ಹೋಗಿರುವವರನ್ನು ಮರಳಿ ಗೂಡಿಗೆ ಕರೆ ತರುವ ಕಸರತ್ತು ನಡೆಸುವ ಮೂಲಕ ಮುಂಬರುವ ವಿಧಾನಸಭಾ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಇದರ ಭಾಗವಾಗಿಯೇ ಚಿಂತಾಮಣಿ ಮಾಜಿ ಶಾಸಕರನ್ನು ಮಾತೃಪಕ್ಷಕ್ಕೆ ಕರೆತರುವ ಯತ್ನ ಸಲವಾಗಿದೆ ಎನ್ನಲಾಗುತ್ತಿದೆ.

ಮಾತೃಪಕ್ಷಕ್ಕೆ ಸೇರುತ್ತಾರಾ? : ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮತ್ತು ಮಾಜಿ ಶಾಸಕ ಡಾ ಎಂ.ಸಿ.ಸುಧಾಕರ್ ನಡುವೆ ಈಗಲೂ ಮುಸುಕಿನ ಗುದ್ದಾಟ ನಡೆಯುತ್ತಲೇ ಇದೆ. ಹಿಂದೆ ಇಬ್ಬರು ಒಂದೇ ಪಕ್ಷದಲ್ಲಿದ್ದರೂ ಬಹಿರಂಗವಾಗಿ ಪರಸ್ಪರ ಟೀಕಿಸಿಕೊಂಡಿದ್ದರು. ಸುಧಾಕರ್ ತಮ್ಮ ತಂದೆ ಮಾಜಿ ಗೃಹ ಸಚಿವ ಎ.ಚೌಡರೆಡ್ಡಿ ರಾಜಕೀಯ ನಿವೃತ್ತಿ ಬಳಿಕ 2004, 2008ರಲ್ಲಿ ಕಾಂಗ್ರೆಸ್‌ನಿಂದ ಸತತ ಎರಡು ಬಾರಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಬಳಿಕ ಕೇಂದ್ರ ಮಾಜಿ ಸಚಿವ, ಕೋಲಾರದ ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ನಡುವಿನ ಭಿನ್ನಮತದಿಂದಾಗಿ ಕಾಂಗ್ರೆಸ್ ತೊರೆದು 2013, 2018ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಅಲ್ಪ ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಬಿಜೆಪಿ ಬೆಂಬಲಿಸಿದ್ದರು! : 2019 ಲೋಕಸಭಾ ಚುನಾವಣೆಯಲ್ಲಿ ಬಹಿರಂಗವಾಗಿ ಕೆ.ಎಚ್.ಮುನಿಯಪ್ಪ ವಿರುದ್ಧ ತೊಡೆ ತಟ್ಟಿದ್ದ ಸುಧಾಕರ್, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಪರ ಪ್ರಚಾರ ಕೈಗೊಂಡಿದ್ದರು. ಮಾಜಿ ಶಾಸಕರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಮುಂಚೂಣಿಯಲ್ಲಿವೆ. ಈ ಹಿನ್ನೆಲೆಯಲ್ಲಿ ಹಲವು ಮಾತುಕತೆಗಳು ನಡೆದಿವೆ. ಇದರ ನಡುವೆ ಡಿ.ಕೆ.ಶಿವಕುಮಾರ್ ನೇರವಾಗಿ ರಂಗಕ್ಕಿಳಿದಿರುವುದು ಸುಧಾಕರ್ ಮಾತೃಪಕ್ಷಕ್ಕೆ ಸೇರ್ಪಡೆ ಖಚಿತ ಎನ್ನಲಾಗಿದೆ.

ಮಾಹಿತಿ ಹಂಚಿಕೊಂಡ ನಾಯಕರು : ಮಾಜಿ ಶಾಸಕ ಮತ್ತು ಕೆಪಿಸಿಸಿ ಅಧ್ಯಕ್ಷರ ಭೇಟಿಯ ವೇಳೆ ರಾಜಕೀಯ ಮಹತ್ವದ ವಿಚಾರಗಳು ಚರ್ಚೆಯಾಗಿವೆ. ಪಕ್ಷಕ್ಕೆ ಆಹ್ವಾನ, ಸೇರ್ಪಡೆ ವೇದಿಕೆ, ಕ್ಷೇತ್ರದ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆದಿರುವ ಜತೆಗೆ ಆಂತರಿಕ ಭಿನ್ನಮತ ಪರಿಹರಿಸುವ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಭೇಟಿಯನ್ನು ರಹಸ್ಯವಾಗಿಯೇ ಇರಿಸಿದ್ದರೂ ಮಾಜಿ ಶಾಸಕರೊಂದಿಗಿನ ಮಾತುಕತೆಯ ಚಿತ್ರಗಳನ್ನು ಡಿ.ಕೆ.ಶಿವಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ವೇದಿಕೆ ಸೃಷ್ಟಿ: ಮುಂದಿನ ವಿಧಾನಸಭೆ ಚುನಾವಣೆಗೆ ಜಿಪಂ ಹಾಗೂ ತಾಪಂ ಚುನಾವಣೆ ಮೂಲಕ ಪೂರಕ ವಾತಾವರಣ ಸೃಷ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್, ಸಂಘಟನೆಯತ್ತ ಹೆಜ್ಜೆಯನ್ನಿರಿಸಿದೆ. ಇದರ ಭಾಗವಾಗಿ ಕಳಚಿರುವ ಕೊಂಡಿಗಳಿಗೆ ಬೆಸುಗೆ ಹಾಕುವ ಕೆಲಸಕ್ಕೆ ಕೈ ಹಾಕಿದ್ದು, ಮಾಜಿ ಶಾಸಕರಾದ ಮಧು ಬಂಗಾರಪ್ಪ, ಡಾ.ಎಂ.ಸಿ.ಸುಧಾಕರ್ ಪಕ್ಷ ಸೇರ್ಪಡೆಯೊಂದಿಗೆ ಈ ಪ್ರಕ್ರಿಯೆ ಆರಂಭವಾಗಲಿದೆ ಎನ್ನಲಾಗುತ್ತಿದೆ.

ಜಿಪಂ, ತಾಪಂ ಪ್ರತಿಷ್ಠೆ : ಇನ್ನು ರಾಜಕೀಯ ಪಕ್ಷಗಳು ಮುಂಬರುವ ಜಿಪಂ, ತಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿವೆ. ಈಗಾಗಲೇ ಮೀಸಲಾತಿ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಪ್ರಕಟವಾಗಿದ್ದು ಚುನಾವಣಾ ಮುಹೂರ್ತ ಘೋಷಣೆಯೊಂದೇ ಬಾಕಿ ಇದೆ.

ಕಾಂಗ್ರೆಸ್ ರಾಜ್ಯ ನಾಯಕರು ಪಕ್ಷ ಸೇರ್ಪಡೆಗೆ ಆಹ್ವಾನಿಸಿದ್ದಾರೆ. ಜಿಪಂ ಹಾಗೂ ತಾಪಂ ಚುನಾವಣೆಗೂ ಮುನ್ನ ಕ್ಷೇತ್ರದ ಬೆಂಬಲಿತರ ಮುಖಂಡರು ಹಾಗೂ ಕಾರ್ಯಕರ್ತರು, ಅಭಿಮಾನಿಗಳ ಜತೆ ಚರ್ಚಿಸಿ ಕಾಂಗ್ರೆಸ್ ಸೇರ್ಪಡೆಯ ಕುರಿತು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಲಾಗುವುದು. ಡಾ.ಎಂ.ಸಿ.ಸುಧಾಕರ್, ಮಾಜಿ ಶಾಸಕ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಘಟನೆ ದೃಷ್ಟಿಯಲ್ಲಿ ಚಿಂತಾಮಣಿ ಮಾಜಿ ಶಾಸಕ ಡಾ.ಎಂ.ಸಿ.ಸುಧಾಕರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಚರ್ಚಿಸಿದ್ದೇವೆ. ಆಂತರಿಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದು ನಾವು ಸುಧಾಕರ್ ಬೆಂಬಲಿಕ್ಕೆ ನಿಂತಿದ್ದೇವೆ. ಕೆ.ಎನ್.ಕೇಶವರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net