ಸಾಧಕರು ಯುವಪೀಳಿಗೆಗೆ ಮಾದರಿಯಾಗಲಿ: ಡಾ.ನಿರ್ಮಲಾನಂದನಾಥ ಸ್ವಾಮೀಜಿ ಕಿವಿಮಾತು

HDC
Published on

ಮಂಡ್ಯ: ಈ ಜಗತ್ತಿಗೆ ಬಂದು ಸಾಧನೆ ಮಾಡಿದ ಮಹನೀಯರ ಪ್ರತಿಮೆಗಳು ಯುವಪೀಳಿಗೆಗೆ ಪ್ರೇರಣೆಯಾಗಿ ಉಳಿಯಬೇಕು ಎಂದು ಆದಿಚುಂಚನಗಿರಿ ಮಠದ ಅಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಹೊಳಲು ಗ್ರಾಮದಲ್ಲಿ ಡಾ.ಎಚ್.ಡಿ.ಚೌಡಯ್ಯ ಪ್ರತಿಮೆ ನಿರ್ಮಾಣ ಸಮಿತಿ ವತಿಯಿಂದ ನಿರ್ಮಿಸಿರುವ ಮಾಜಿ ಶಾಸಕ ಡಾ.ಎಚ್.ಡಿ ಚೌಡಯ್ಯ ಪ್ರತಿಮೆಯನ್ನು ಬುಧವಾರ ಅನಾವರಣಗೊಳಿಸಿ ಮಾತನಾಡಿದರು.
ಇಂದಿನ ಆಧುನಿಕ ಜಗತ್ತಿನಲ್ಲಿ ಆದರ್ಶಗಳಿಗೆ ಕೊರತೆಯೇನೂ ಇಲ್ಲ. ನಾಯಕರ ಆದರ್ಶಗಳ ಎತ್ತರದ ಮಟ್ಟಕ್ಕೆ ಬೆಳೆಯಬೇಕು. ಅಂತಹ ಆದರ್ಶ ಪುರುಷರ ಪ್ರತಿಮೆಗಳು ಪ್ರೇರಣೆ ನೀಡುವಂತಿರಬೇಕು. ಅಂತಹ ಪ್ರತಿಮೆಗಳ ದರ್ಶನವಾದಾಗ, ಉದ್ದೀಪನಗೊಂಡು ಮೌಲ್ಯಗಳು ನೆನಪಿಗೆ ಬರುವುದಾದರೆ ಅಂತಹ ಹತ್ತಾರು ಪ್ರತಿಮೆಗಳಿದ್ದರೂ ತೊಂದರೆ ಇಲ್ಲ. ಈ ನಿಟ್ಟಿನಲ್ಲಿ ಡಾ.ಎಚ್.ಡಿ.ಚೌಡಯ್ಯ ಪ್ರೇರಕರಾಗಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು.
ಸ್ವಾಮಿ ವಿವೇಕಾನಂದರಿಗೆ ರಾಮಕೃಷ್ಣ ಪರಮಹಂಸರು ಆದರ್ಶ. ಅರವಿಂದರಿಗೆ ವಿವೇಕಾನಂದರು ಆದರ್ಶವಾದರು. ನಮ್ಮ ಯುವಕರು ವಿದೇಶಗಳ ಕನಸು ಕಾಣದೆ ದೇಶದಲ್ಲಿ ಬೇಕಾದಷ್ಟು ಬದಲಾವಣೆಗಳಾಗಿದ್ದು ಇಲ್ಲಿಯೇ ತೊಡಗಿಸಿಕೊಂಡು ಸಾಧನೆ ಮಾಡಬೇಕು. ಹಿರಿಯರು ಮಕ್ಕಳಿಗೆ ಆದರ್ಶಗಳನ್ನು ತಿಳಿಸುವ ಕೆಲಸ ಮಾಡಬೇಕು ಎಂದರು.
ಮಾಜಿ ಶಾಸಕ ಡಾ.ಎಚ್.ಡಿ.ಚೌಡಯ್ಯ ಅವರ ಸಿಡಿಮಿಡಿಯ ಹಿಂದೆ ಪ್ರಾಮಾಣಿಕತೆ ಇರುತ್ತಿತ್ತು. ಅವರ ಸಮಯಪಾಲನೆ ಎಲ್ಲರಿಗೂ ಮಾದರಿಯಾಗಿತ್ತು. ಇಂತಹವರ ಸಂಖ್ಯೆ ಹೆಚ್ಚಾಗಲಿ ಎಂದು ಆಶಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ಎಚ್.ಎಸ್.ಮುದ್ದೇಗೌಡ ರಚಿಸಿರುವ ’ಕಾಯಕಯೋಗಿ ಡಾ.ಎಚ್.ಡಿ.ಚೌಡಯ್ಯ’ ಪುಸ್ತಕ ಬಿಡುಗಡೆ ಮಾಡಿದ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಮಾತನಾಡಿ, ಎಲ್ಲವೂ ಶಿಸ್ತುಬದ್ಧವಾಗಿರಬೇಕು ಎನ್ನುವ ಕಾರಣಕ್ಕೆ ಚೌಡಯ್ಯ ಅವರೊಂದಿಗೆ ಆಗಾಗ್ಗೆ ಸಂಘರ್ಷ ಇರುತ್ತಿತ್ತು. ಆದರೂ ತಕ್ಷಣ ಆತ್ಮೀಯತೆಯಿಂದ ನಮ್ಮನ್ನು ತಿದ್ದುತ್ತಿದ್ದರು. ನಮ್ಮಂತಹ ಯುವ ನಾಯಕರಿಗೆ ಸಹಕಾರ ತತ್ವದ ಬಗ್ಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಸಮಾಜಕ್ಕೆ ಹತ್ತಾರು ಒಳ್ಳೆಯ ಕೆಲಸ ಮಾಡಿದ್ದಾರೆ. ರಾಷ್ಟ್ರ ಒಪ್ಪುವ ನಾಯಕತ್ವ ಕೊಟ್ಟಿದ್ದಾರೆ. ಜಿಲ್ಲೆಯು ಅಭಿವೃದ್ಧಿಯಾಗಬೇಕು ಎನ್ನುವ ಮಾತುಗಳನ್ನು ಸದಾ ಅವರು ನೆನಪಿಸುತ್ತಿದ್ದರು. ಸಾರ್ವಜನಿಕ ಕ್ಷೇತ್ರದಲ್ಲಿ ಶಿಸ್ತುಬದ್ಧ ನಡವಳಿಕೆಯಿಂದ ಗಮನ ಸೆಳೆದಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಮೇಲುಕೋಟೆ ಶಾಸಕ ಸಿ.ಎಸ್.ಪುಟ್ಟರಾಜು ಮಾತನಾಡಿ, ನಮ್ಮಂತಹ ನಾಯಕರಿಗೆ ಚೌಡಯ್ಯ ಪ್ರೀತಿಯ ಆಶೀರ್ವಾದ ಮಾಡಿದ್ದಾರೆ. ಸಮಾರಂಭಕ್ಕೆ ತಡವಾಗಿ ಬಂದರೆ ಗದರಿದ್ದಾರೆ. ಕೆ.ವಿ.ಶಂಕರಗೌಡ, ಎಸ್.ಎಂ.ಕೃಷ್ಣ, ಡಾ.ಜಿ.ಮಾದೇಗೌಡರಂತೆ ಚೌಡಯ್ಯ ಎಲ್ಲರನ್ನೂ ಒಗ್ಗೂಡಿಸಿ ಜಿಲ್ಲೆಯನ್ನು ಮುನ್ನಡೆಸಿದ್ದಾರೆ. ಚೌಡಯ್ಯ ಅವರ ವಿಷಯ ದೆಹಲಿಯಲ್ಲೂ ಪ್ರಸ್ತಾಪವಾಗುತ್ತಿತ್ತು ಎಂದು ಸ್ಮರಿಸಿದರು.
ಮಾಜಿ ಶಾಸಕ ಎಚ್.ಬಿ.ರಾಮು, ವಿಶ್ರಾಂತ ಪ್ರಾಂಶುಪಾಲ ಎಸ್.ಬಿ.ಶಂಕರಗೌಡ ಮಾತನಾಡಿದರು. ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡರಿಗೆ ಡಾ.ಎಚ್.ಡಿ.ಚೌಡಯ್ಯ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಮೂಳೆ ಮತ್ತು ಕೀಲು ಶಸ್ತ್ರ ಚಿಕಿತ್ಸಕ ಡಾ.ಎಚ್.ಎಸ್.ರವಿಕುಮಾರ್ ಹಾಗೂ ಬಂಟ್ವಾಳ ತಹಸೀಲ್ದಾರ್ ಡಾ.ಸ್ಮಿತಾರಾಮು ಅವರನ್ನು ಜನತಾ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಸನ್ಮಾನಿಸಿದರು.
ಕೊಮ್ಮೇರಹಳ್ಳಿ ಶಾಖಾ ಮಠದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಸಚಿವ ಎಂ.ಎಸ್.ಆತ್ಮಾನಂದ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಹೊಳಲು ಗ್ರಾಪಂ ಅಧ್ಯಕ್ಷ ಎಚ್.ಡಿ. ರವಿ, ಸೊಸೈಟಿ ಅಧ್ಯಕ್ಷ ಎಚ್.ಎಂ.ಕುಮಾರ್, ಡೇರಿ ಅಧ್ಯಕ್ಷೆ ಪದ್ಮಾ, ಪ್ರತಿಮೆ ನಿರ್ಮಾಣ ಸಮಿತಿಯ ಅಧ್ಯಕ್ಷ ಎಚ್.ಎಲ್.ಶಿವಣ್ಣ, ಕಾರ್ಯದರ್ಶಿ ಲಿಂಗಪ್ಪ, ಎಚ್.ಸಿ.ಹರಿಪ್ರಸಾದ್, ಮೋಹನ್, ಎಚ್.ಬಿ.ಶಿವಣ್ಣ, ಎಚ್.ಸಿ.ಶ್ರೀಧರ್ ಇತರರಿದ್ದರು.
ಇದೇ ವೇಳೆ ಹೊಳಲು ಸರ್ಕಾರಿ ಪ್ರೌಢಶಾಲೆಯ ಎಚ್.ಕೆ.ವಿಸ್ಮಯಾ, ವೆಂಕಟೇಶ್ವರ ವಿದ್ಯಾನಿಕೇತನ ಶಾಲೆಯ ಎಸ್.ದಿಶಾ, ಸಿ.ಎಸ್.ಭುವನ್ ಅವರಿಗೆ ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net