ದಾಖಲೆ ಸಹಿತ ಬನ್ನಿ ಚರ್ಚೆ ಮಾಡೋಣ: ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪಂಥಾಹ್ವಾನ

Ex-MLA Dr.K.Annadani press conference Mandya
Published on

ಮಂಡ್ಯ: ಮಳವಳ್ಳಿ ವಿಧಾನಸಭಾ ಕ್ಷೇತ್ರದಲ್ಲಾಗಿರುವ ಅಭಿವೃದ್ದಿ ಕೆಲಸಗಳು ತಮ್ಮಿಂದಲೇ ಆಗಿದೆ ಎನ್ನುವಂತೆ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಬಿಂಬಿಸಿಕೊಳ್ಳುತ್ತಿದ್ದಾರೆ. ಅವರು ಮಂತ್ರಿ ಹಾಗೂ ಶಾಸಕರಾಗಿ ಎಷ್ಟು ಅಭಿವೃದ್ಧಿ ಯೋಜನೆಯನ್ನು ಕ್ಷೇತ್ರಕ್ಕೆ ತಂದಿದ್ದಾರೆಂದು ದಾಖಲೆ ಬಿಡುಗಡೆ ಮಾಡಿ ಚರ್ಚೆಗೆ ಬರಲಿ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಪಂಥಾಹ್ವಾನ ನೀಡಿದರು.

ಮಾಡಿರುವ ಕೆಲಸ ಮಾತನಾಡಬೇಕೇ ಹೊರತು ಮಾತನಾಡುವುದೇ ಕೆಲಸವಾಗಬಾರದೆಂದು ವೇದಿಕೆಯಲ್ಲಿ ನರೇಂದ್ರಸ್ವಾಮಿ ಹೇಳಿದ್ದಾರೆ. ಜತೆಗೆ ನನ್ನ ವಿರುದ್ಧ ಅಪಹಾಸ್ಯ ಮಾಡಿದ್ದಾರೆ. ಆಗಿದ್ದರೆ ಅವರು ಮಾಡಿರುವ ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿದಂತೆ ದಾಖಲೆ ಸಮೇತ ಚರ್ಚೆ ಮಾಡೋಣ. ಅದಕ್ಕೆ ಅವರೇ ದಿನಾಂಕ ನಿಗದಿಪಡಿಸಲಿ ಅಥವಾ ನಾನು ದಿನ ನಿಗದಿ ಮಾಡಿ ಆಹ್ವಾನ ನೀಡುತ್ತೇನೆ ಎಂದು ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದರು.

ನಾನು ದೇವರಾಜ ಅರಸು ಅಭಿವೃದ್ಧಿ ಮಂಡಳಿಯ ಅಧ್ಯಕ್ಷನಾಗಿದ್ದ ವೇಳೆ ಹಿಂದುಳಿದ ವರ್ಗದ ಜನರಿಗೆ ಅನುದಾನ ಒದಗಿಸಿ, ಅಭಿವೃದ್ಧಿಯತ್ತ ಸಾಗಲು ಸಹಾಯ ಮಾಡಿದ್ದೇನೆ. ಇದರಿಂದ ಕುರುಬ, ಕುಂಬಾರ, ತಿಗಳ ಸೇರಿದಂತೆ ಹಲವು ಸಮಾಜದವರು ಅಭಿವೃದ್ಧಿಯ ಹಾದಿಗೆ ಸಾಗಲು ಸಹಕಾರಿಯಾಗಿದೆ. ನರೇಂದ್ರಸ್ವಾಮಿ ಮಂತ್ರಿಯಾಗಿದ್ದ ವೇಳೆ ಏನೆಲ್ಲ ಅಭಿವೃದ್ಧಿ ಕೆಲಸ ಮಾಡಿದ್ದಾರೆಂಬ ಸಾಧನೆ ತೆರೆದಿಡಲಿ. ಈಗ ಎರಡು ವರ್ಷದಿಂದ ತಾಲೂಕಿಗೆ ಎಷ್ಟು ಹಣ ತಂದಿದ್ದಾರೆ ಎಂದು ಹೇಳಲಿ. ದಾಖಲೆಗಳ ಸಮೇತ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ದೇವಾಲಯಕ್ಕೆ ಬರಲಿ ಎಂದರು.

ತಾಲೂಕಿನಲ್ಲಿ ಸಾವಿರಾರು ಎಕರೆ ಸರ್ಕಾರಿ ಜಮೀನು ಅಕ್ರಮ ಖಾತೆ ಮಾಡಿಸಿಕೊಂಡಿರುವುದನ್ನು ರದ್ದುಪಡಿಸಿದ್ದೇನೆ ಎಂದು ಹೇಳಿಕೊಳ್ಳುವ ಶಾಸಕರು, ಅವರ ಆಪ್ತ ಹತ್ತಾರೂ ಎಕರೆ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಕೊಂಡಿರುವುದು ತನಿಖೆಯಿಂದ ಬಯಲಾಗಿದೆ. ಈ ಪ್ರಕರಣ ತನಿಖೆಯಾಗಲೆಂದು ಯಾವಾಗ ಒತ್ತಾಯಿಸಿದರು. ಎಷ್ಟು ಹೋರಾಟ ಮಾಡಿದ್ದಾರೆ, ಯಾರನ್ನು ಆಗ್ರಹಿಸಿದ್ದಾರೆ ಎಂಬುದನ್ನು ಬಹಿರಂಗಪಡಿಸಬೇಕು. ಈ ಸಂಬಂಧ ತನಿಖೆಯಾಗಲೆಂದು 2024ರ ಜ.1ರಂದು ಜೆಡಿಎಸ್ ಮತ್ತು ಬಿಜೆಪಿ ಜಂಟಿಯಾಗಿ ಪ್ರತಿಭಟನೆ ನಡೆಸಿದ್ದು, ಅದರ ಫಲವಾಗಿ ತಹಸೀಲ್ದಾರ್ ನೇತೃತ್ವದಲ್ಲಿ ತನಿಖೆ ನಡೆದು 305 ಎಕರೆಯ ಅಕ್ರಮ ಖಾತೆಗಳ ರದ್ದು ಮಾಡಲಾಗಿದೆ. ಈಗ ಇದರ ಲಾಭವನ್ನು ಶಾಸಕರು ಪಡೆಯುತ್ತಿದ್ದಾರೆ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ನನ್ನನ್ನು ಹಾಡೇಳುವವನು ಎಂದು ಅಪಹಾಸ್ಯ ಮಾಡುತ್ತಿದ್ದು, ನಾನೊಬ್ಬ ಜನಪದ ಕಲಾವಿದನಾಗಿರುವುದರಿಂದ ಹಾಡೇಳುವುದು ನನ್ನ ಕಲೆ. ಎರಡು ಪದವಿ ಪಡೆದು, ಜನಪದ ಪಿ.ಎಚ್‌ಡಿ ಪಡೆದಿದ್ದೇನೆ. ಆದರೆ ಅವರಂತೆ ಗುಂಡಾಗಿರಿ, ಬೆದರಿಸುವ ಕಲೆ ನನಗಿಲ್ಲ. ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳದೇ ಶಾಸಕರು ಮಾತನಾಡುವಾಗ ನಾಲಗೆ ಮೇಲೆ ಹಿಡಿತವಿರಲಿ. ಅಸಮರ್ಥ, ಹಾಡಿನ ಗಿರಾಕಿ ಎಂಬ ಅಪಹಾಸ್ಯದ ಪದ ಬಳಕೆ ಮಾಡಿದರೆ ಮುಂದಿನ ದಿನಗಳಲ್ಲಿ ಬೇರೆ ತರಹದ ಪದಬಳಕೆ ಮಾಡಬೇಕಾಗುವುದು ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್ ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಎಸ್.ಡಿ.ಜಯರಾಂ, ಮಳವಳ್ಳಿ ತಾಲೂಕು ಎಸ್ಸಿ ವಿಭಾಗದ ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಶ್ರೀಧರ್, ಕಾಂತರಾಜ್, ಸಿದ್ದಾಚಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net