

ಹುಬ್ಬಳ್ಳಿ: ಧಾರವಾಡ ಜಿಪಂ ಸದಸ್ಯರಾಗಿದ್ದ ಯೋಗೀಶಗೌಡ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯನ್ನು ಇಲ್ಲಿಯ ಗೋಕುಲದ ಸಿಎಆರ್ ಪೊಲೀಸ್ ಕೇಂದ್ರ ಸ್ಥಾನದಲ್ಲಿ ವಿಚಾರಣೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು, ಭಾನುವಾರ ಏಕ ಕಾಲದಲ್ಲಿ ಕುಲಕರ್ಣಿ ಸಹವರ್ತಿಗಳು, ಇತರರನ್ನೂ ಕರೆಸಿಕೊಂಡು ಅನೇಕ ಪ್ರಶ್ನೆ ಕೇಳಿದರು.
ಸಿಬಿಐ ಅಧಿಕಾರಿಗಳು ನಡೆಸಿದ ವಿಚಾರಣೆ ಕ್ರಮ ಸಾಕಷ್ಟು ಭಿನ್ನವಾಗಿಯೇ ಇತ್ತು. ಯಾವ ಹಂತದಲ್ಲೂ ಅಧಿಕಾರಿಗಳು ಆರೋಪಿ ಅಥವಾ ಸಹಚರರ ವಿರುದ್ಧ ರೇಗಾಡುವುದಾಗಲೀ, ಬೆದರಿಸುವುದಾಗಲೀ, ಒತ್ತಡ ಹಾಕುವುದಾಗಲೀ ಮಾಡಲಿಲ್ಲ. ಬದಲಾಗಿ ಅತ್ಯಂತ ಶಾಂತರಾಗಿ, ಅಷ್ಟೇ ಖಚಿತವಾಗಿ ಪ್ರಶ್ನೆಗಳನ್ನು ಕೇಳಿದರು. ವಿಚಾರಣೆಗೆ ಹಾಜರಾದವರು ಒತ್ತಡಕ್ಕೆ ಒಳಗಾಗದೇ ನಿರಾಳವಾಗಿ ಉತ್ತರ ನೀಡಲು ಪೂರಕವಾಗಿ ಅತ್ಯಂತ ಗೌರವದಿಂದಲೇ ನಡೆದುಕೊಂಡರು ಎಂದು ತಿಳಿದುಬಂದಿದೆ.
ಕೊಲೆ ಸಂಚು, ಸಾಕ್ಷ್ಯಾಶ ಮತ್ತಿತರ ಆರೋಪ ಎದುರಿಸುತ್ತಿರುವ ವಿನಯ ಕುಲಕರ್ಣಿ ಎದುರಿನಲ್ಲೇ, ಅನತಿ ದೂರದಲ್ಲಿ ಇತರರನ್ನು ವಿಚಾರಣೆ ಮಾಡಿದ್ದು ಇನ್ನೊಂದು ವಿಶೇಷ. ಹೇಗೆಂದರೆ- ಪತಿ ಯೋಗೀಶಗೌಡ ಹತ್ಯೆಯಾದಾಗ ರಾಜಕೀಯ ದ್ವೇಷವೇ ಇದಕ್ಕೆ ಕಾರಣ ಎಂದು ಗೋಳಾಡುತ್ತ ಆಕ್ರೋಶ ವ್ಯಕ್ತಪಡಿಸಿದ್ದ ಮಲ್ಲಮ್ಮನನ್ನು ಕರೆಸಿಕೊಂಡ ಅಧಿಕಾರಿಗಳು ವಿನಯ ಕುಲಕರ್ಣಿ ಕುಳಿತಿರುವ ಹಜಾರದಲ್ಲೇ ತುಸು ದೂರದಲ್ಲಿ ಕೂಡ್ರಿಸಿಕೊಂಡು ನಯವಾಗಿ ಪ್ರಶ್ನಿಸಿದರು.
ವಿಚಾರಣೆಗೆ ಹಾಜರಾದ ಕಾಂಗ್ರೆಸ್ನ ನಾಗರಾಜ ಗೌರಿ ಪ್ರಶ್ನೆಗಳಿಗೆ ಉತ್ತರಿಸಿ, ವಿನಯ ಕುಲಕರ್ಣಿ ಮತ್ತು ಮಲ್ಲಮ್ಮನನ್ನು ತನ್ನ ಮನೆಯಲ್ಲೇ ಭೇಟಿ ಮಾಡಿಸಿದ್ದೆ ಎಂದು ಹೇಳಿದರು. ಆಗಲೂ ಎದುರಿಗೆ ವಿನಯ ಕುಲಕರ್ಣಿ ಕುಳಿತಿದ್ದರು. ಆದರೆ, ನಾಗರಾಜ ಗೌರಿ-ವಿನಯ ಕುಲಕರ್ಣಿ ಪರಸ್ಪರ ಮಾತಾಡಲು ಅವಕಾಶ ಇರಲಿಲ್ಲ. ಉಳಿದವರ ವಿಚಾರದಲ್ಲಿಯೂ ಈ ‘ಸಮ್ಮುಖದ ವಿಚಾರಣೆ’ಯೇ ನಡೆಯಿತು ಮತ್ತು ಆಗೆಲ್ಲ ವಿನಯ ಕುಲಕರ್ಣಿಯ ಮುಖಭಾವದಲ್ಲಾಗುತ್ತಿದ್ದ ಬದಲಾವಣೆ, ಏರುಪೇರುಗಳನ್ನು ಅಧಿಕಾರಿಗಳು ಸೂಕ್ಷ್ಮವಾಗಿ ಗಮನಿಸುತ್ತಿದ್ದರು ಎಂದು ತಿಳಿದು ಬಂದಿದೆ.
ಮಹತ್ವದ ಸಂಗತಿ ಎಂದರೆ, ಭಾನುವಾರ ವಿಚಾರಣೆಗೆ ಕರೆಸಲ್ಪಟ್ಟವರಲ್ಲಿ ಒಬ್ಬಿಬ್ಬರನ್ನು ಬಿಟ್ಟರೆ ಉಳಿದವರೆಲ್ಲ ಈ ಹಿಂದೆ ಸಿಬಿಐ ಅಧಿಕಾರಿಗಳ ಎದುರು ಹಾಜರಾದವರೇ. ಆಗ ಅವರು ನೀಡಿದ್ದ ಹೇಳಿಕೆಯ ಪ್ರತಿ ಅಧಿಕಾರಿಗಳ ಕೈಯಲ್ಲಿ ಇತ್ತು.
ಒಟ್ಟಾರೆಯಾಗಿ, ಸಿಬಿಐ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಮುಂದಕ್ಕೆ ಕೊಂಡೊಯ್ಯುವ ರೀತಿ ಕುತೂಹಲವನ್ನು ಇಮ್ಮಡಿಗೊಳಿಸಿದೆ.
ಚಾಲಕನ ವಿಚಾರಣೆ: ವಿನಯ ಕುಲಕರ್ಣಿ ಸಚಿವರಾಗಿದ್ದಾಗ ಆಪ್ತ ಸಹಾಯಕನಾಗಿದ್ದ ಸೋಮಶೇಖರ ನ್ಯಾಮಗೌಡ ಅವರ ಕಾರ್ಗೆ ಗುತ್ತಿಗೆ ಆಧಾರದಲ್ಲಿ ಚಾಲಕನಾಗಿದ್ದ ಪುಂಡಲೀಕ ಮೊರಬದ ಅವರನ್ನೂ ಸಿಬಿಐ ಅಧಿಕಾರಿಗಳು ಕರೆಸಿಕೊಂಡು ವಿಚಾರಣೆ ನಡೆಸಿದರು. ಸಂಜೆ 7.30ಕ್ಕೆ ಅವರನ್ನು ಕಳುಹಿಸಿಕೊಟ್ಟರು.
ಕಾಂಗ್ರೆಸ್ ಸೇರಿಸುವಂತೆ ಕಣ್ಣೀರಿಟ್ಟಿದ್ದ ಮಲ್ಲಮ್: ಕಾಂಗ್ರೆಸ್ ಪಕ್ಷಕ್ಕೆ ತನ್ನನ್ನು ಸೇರಿಸುವಂತೆ ಯೋಗೀಶಗೌಡ ಗೌಡರ ಪತ್ನಿ ಮಲ್ಲಮ್ಮ ನನ್ನ ಬಳಿ ಕಣ್ಣೀರಿಟ್ಟಿದ್ದರು. ಆದರೆ, ವಿನಯ ಕುಲಕರ್ಣಿ ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಹೇಳಿದರು. ಭಾನುವಾರ ಇಲ್ಲಿಯ ಗೋಕುಲದ ಸಿಎಆರ್ ಕೇಂದ್ರ ಸ್ಥಾನದಲ್ಲಿ ಸಿಬಿಐ ವಿಚಾರಣೆ ಎದುರಿಸಿ ಹೊರಬಂದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಹೆಬ್ಬಳ್ಳಿ ಜಿಪಂ ಉಸ್ತುವಾರಿಯಾಗಿದ್ದ ಸಂದರ್ಭದಲ್ಲಿ ಶಿವಾನಂದ ಕರಿಗಾರ ನೇತೃತ್ವದಲ್ಲಿ ಕುರುಬ ಸಮಾಜದ ಮುಖಂಡರೊಂದಿಗೆ ಮಲ್ಲಮ್ಮ ಭೇಟಿ ಮಾಡಿದ್ದರು. ನಂತರ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ್ದರು. ಪಕ್ಷಕ್ಕೆ ಸೇರ್ಪಡೆ ಕುರಿತು ನಮ್ಮ ಮನೆಯಲ್ಲೇ ವಿನಯ ಕುಲಕರ್ಣಿ ಹಾಗೂ ಮಲ್ಲಮ್ಮರನ್ನು ಭೇಟಿ ಮಾಡಿಸಿದ್ದೆ. ಈ ಎಲ್ಲ ವಿಚಾರಗಳನ್ನು ಸಿಬಿಐ ಎದುರು ಉತ್ತರಿಸಿದ್ದೇನೆ. ಹಣಕಾಸಿನ ಬಗ್ಗೆ ಯಾವುದೇ ಪ್ರಶ್ನೆ ಕೇಳಿಲ್ಲ. ಆದರೆ, ಆಕೆಗೆ ಯಾವುದೇ ಹಣ ನೀಡಿಲ್ಲವೆಂದು ಹಿಂದಿನ ಬಾರಿ ವಿಚಾರಣೆಯಲ್ಲೇ ಹೇಳಿದ್ದೆ ಎಂದರು. ವಿಚಾರಣೆ ವೇಳೆ ವಿನಯ ಕುಲಕರ್ಣಿ ಮುಖ ನೋಡಿದೆ. ಆದರೆ, ಮಾತನಾಡಲು ಅವಕಾಶವಾಗಲಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ವಿನಯ ಕುಲಕರ್ಣಿ (ವಿಕೆ) ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ. ಇದರ ಹಿಂದೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಕೈವಾಡವಿದೆ. ಲಿಂಗಾಯತ ನಾಯಕನನ್ನು ವ್ಯವಸ್ಥಿತವಾಗಿ ಮುಗಿಸುವ ಹುನ್ನಾರವಿದು ಎಂದು ಆರೋಪಿಸಿದರು.