

ದಾವಣಗೆರೆ: ಬಿಜೆಪಿಯವರು ಮೋದಿ ಹೆಸರು ಹೇಳಿಕೊಂಡು ಬರುತ್ತಾರೆಯೇ ಹೊರತು ಅವರಿಗೆ ಸ್ವಂತ ವರ್ಚಸ್ಸು ಇಲ್ಲ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಟಾಂಗ್ ಕೊಟ್ಟರು.
ನಗರದ ಹಳೇಪೇಟೆಯ ವೀರಭದ್ರೇಶ್ವರ ಸ್ವಾಮಿಯ ಗುಗ್ಗಳದಲ್ಲಿ ಪಾಲ್ಗೊಂಡ ನಂತರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಪಕ್ಷ ಮತ್ತು ನಾಯಕರ ಹೆಸರು ಹೇಳುವುದು ಬಿಟ್ಟು ಇಬ್ಬರೂ ವೈಯಕ್ತಿಕ ನೆಲೆಯಲ್ಲಿ ಜನರ ಬಳಿಗೆ ಹೋಗೋಣ. ಅವರು ಯಾರಿಗೆ ಮತ ಹಾಕುತ್ತಾರೆ ನೋಡೋಣ ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು.
ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಬಿಜೆಪಿ ಆಡಳಿತದಿಂದ ಜನರು ಬೇಸತ್ತಿದ್ದಾರೆ. ಹಿಂದೆಂದೂ ಕಾಣದಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಅಭಿವೃದ್ಧಿಯ ಬಗ್ಗೆ ಅವರಿಗೆ ದೂರದೃಷ್ಟಿಯಿಲ್ಲ. ಸರಿಯಾಗಿ ಯೋಜನೆಗಳನ್ನು ಮಾಡುವುದಿಲ್ಲ. ಕಾಮಗಾರಿ ಕೈಗೊಳ್ಳುವ ಮೊದಲು ಅದರ ಬಗ್ಗೆ ಜ್ಞಾನವಿರಬೇಕು. ಜನರಿಗೆ ಏನು ಬೇಕಾಗಿದೆ ಎನ್ನುವ ಪರಿಕಲ್ಪನೆ ಇರಬೇಕು. ಬಿಜೆಪಿಯವರಲ್ಲಿ ಅದರ ಕೊರತೆಯಿದೆ ಎಂದರು.
ಈ ಹಿಂದೆ ತಾವು ಅಧಿಕಾರದಲ್ಲಿದ್ದಾಗ ಕೈಗೊಂಡ ಕೆಲಸಗಳ ಬಗ್ಗೆ ವಿವರಿಸಿ, ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಿದ್ದು, ಒಳಚರಂಡಿ, ಮಳೆನೀರು ಚರಂಡಿ, ರಸ್ತೆಗಳ ಅಭಿವೃದ್ಧಿ ಮಾಡಿದ್ದು ಇನ್ನಿತರ ಸಾಧನೆಗಳನ್ನು ಹೇಳಿಕೊಂಡರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ದಾವಣಗೆರೆ 9ನೇ ಸ್ಥಾನ ಪಡೆದಿದ್ದು ಹೇಗೆ ಎಂದು ಪ್ರಶ್ನಿಸಿದರು. ಹಳೇ ಬಸ್ ನಿಲ್ದಾಣವನ್ನು ಕೆಡಿಸಿದ್ದಾರೆ. ಡಿಸಿಎಂ ಸೇತುವೆಯನ್ನು ಈಗ ದುರಸ್ತಿ ಮಾಡಿಸಿದ್ದಾರೆ. ಅಶೋಕ ರೈಲ್ವೆ ಗೇಟ್ ಬಳಿಯ ಕೆಳಸೇತುವೆ ಸರಿಯಾಗಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ತಾವು ನೋಡಿದ್ದಾಗಿ ತಿಳಿಸಿದರು.
ಮುಖ್ಯಮಂತ್ರಿ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಸಿದ್ದರಾಮಯ್ಯ ಒಳ್ಳೆಯ ಆಡಳಿತ ನೀಡಿದ್ದಾರೆ, ಈಗ ಅಂಥವರ ಅಗತ್ಯವಿದೆ. ಅದೇ ರೀತಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿ ಅನೇಕ ನಾಯಕರಿದ್ದಾರೆ. ವರಿಷ್ಠರು ತೀರ್ಮಾನ ಮಾಡುತ್ತಾರೆ.ಎಸ್.ಎಸ್. ಮಲ್ಲಿಕಾರ್ಜುನ್, ಮಾಜಿ ಸಚಿವ