

ವಿಜಯವಾಣಿ ಸುದ್ದಿಜಾಲ ಉಡುಪಿ
ಮಲ್ಪೆಯಲ್ಲಿ ನಡೆದ ಮಹಿಳೆ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಮೀನುಗಾರ ಸಮುದಾಯದ ಮೂವರು ಆರೋಪಿಗಳಿಗೆ ಮಾ.27ರಂದು ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆದರೆ, ಕೋರ್ಟ್ ಆದೇಶ ನೀಡಿ ಮಾ.29ಕ್ಕೆ ಎರಡು ದಿನವಾದರೂ ಸಹ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜೈಲ್ನ ಅಧಿಕಾರಿಗಳು ಅವರನ್ನು ಬಿಡುಗಡೆ ಮಾಡಿಲ್ಲ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ಮಾಜಿ ಸಚಿವ ಪ್ರಮೋದ ಮಧ್ವರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರವಾಗಿ ಮಾ.29ರಂದು ತನ್ನ ಎಕ್ಸ್ ಖಾತೆಯಲ್ಲಿ ಹಾಗೂ ವಾಟ್ಸಾಪ್ ಸ್ಟೇಟಸ್ನಲ್ಲಿ ಬರಹ ಹಾಗೂ ಧ್ವನಿ ಸಂದೇಶದ ಮೂಲಕ ಪೊಲೀಸರ ಕ್ರಮ ಖಂಡಿಸಿದ್ದಾರೆ.
ಮಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲ್ನಲ್ಲಿರುವ ಮೀನುಗಾರ ಮಹಿಳೆಯರನ್ನು ಬಿಡುಗಡೆ ಮಾಡುವಂತೆ ಹೈಕೋರ್ಟ್ ಜಾಮೀನು ನೀಡಿದೆ. ಆದರೆ, ನ್ಯಾಯಾಲಯ ಆದೇಶ ನೀಡಿ 48 ತಾಸಾದರೂ ಸಹ ಮಂಗಳೂರು ಜೈಲಿನಿಂದ ಮಲ್ಪೆ ಮೀನುಗಾರರನ್ನು ಬಿಡುಗಡೆ ಮಾಡಿಲ್ಲ. ಈ ವಿಚಾರವಾಗಿ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಅತ್ಯುನ್ನತ ಸ್ಥಾನದಲ್ಲಿರುವ ಡಿಜಿಪಿ ಅಲೋಕಮೋಹನ್ ಅವರಿಗೆ ದೂರವಾಣಿ ಕರೆ ಮಾಡಿ, ಹೈಕೋರ್ಟ್ ತಿಳಿಸಿದ್ದರೂ ಸಹ ಉಡುಪಿ ಜಿಲ್ಲಾ ಪೊಲೀಸರು ಬಂಧಿತ ಮೀನುಗಾರ ಮಹಿಳೆಯರನ್ನು ಬಿಡುಗಡೆ ಮಾಡಿಲ್ಲ. ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದೇನೆ. ಇದಕ್ಕೆ ತಕ್ಷಣವೇ ಸ್ಪಂದಿಸುವುದಾಗಿ ಡಿಜಿಪಿ ಭರವಸೆ ನೀಡಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮಲ್ಪೆ ಪ್ರಕರಣಕ್ಕೆ ಸಂಬಂಧಿಸಿ ಮಂಗಳುರು ಜೈಲ್ನಲ್ಲಿದ್ದ ಮತ್ತಿಬ್ಬರು ಆರೋಪಿಗಳಿಗೂ ಹೈಕೋರ್ಟ್ ಮಾ.29ರಂದು ಜಾಮೀನು ನೀಡಿದೆ. ಪಾರ್ವತಿ ಮತ್ತು ಲೀಲಾ ಅವರಿಗೆ ಷರತ್ತುಬದ್ದ ಜಾಮೀನು ನೀಡಿರುವ ನ್ಯಾಯಲಾಯ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದೆ.
ಬಂಧನ ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಇಬ್ಬರು ಆರೋಪಿಗಳಿಗೆ ಜಾಮೀನು ನೀಡಿದೆ. ಇನ್ನೋರ್ವ ಆರೋಪಿಯ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಹಂತದಲ್ಲಿದೆ. ಈಗಾಗಲೇ ಪ್ರಕರಣದ ಪ್ರಮುಖ ಆರೋಪಿಗಳಾದ ಲಕ್ಷ್ಮೀ, ಶಿಲ್ಪಾ ಹಾಗೂ ಸುಂದರ ಎಂಬವರಿಗೆ ಹೈಕೋರ್ಟ್ ಮಾ.27ರಂದೇ ಜಾಮೀನು ನೀಡಿದೆ.