

ಕೊಪ್ಪಳ: ಮಾಜಿ ಸಚಿವೆ ಮೋಟಮ್ಮ ಶನಿವಾರ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮನ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ನಂತರ ಮಾತನಾಡಿ, ಚುನಾವಣೆ ಪೂರ್ವದಲ್ಲಿ ಅನೇಕ ಪುಣ್ಯ ಕ್ಷೇತ್ರಗಳಿಗೆ ಹರಕೆ ಕಟ್ಟಿಕೊಂಡಿದ್ದೆ. ಸದ್ಯ ಹೋಗಿ ಹರಕೆ ತೀರಿಸುತ್ತಿರುವೆ. ಕಾಂಗ್ರೆಸ್ ಸರ್ಕಾರ ಐದು ವರ್ಷ ಪೂರ್ಣ ಅಧಿಕಾರ ನಡೆಸಲಿ ಎಂದು ಬೇಡಿರುವೆ.
ಹುಲಿಗೆಮ್ಮ ತಾಯಿ ಶಕ್ತಿ ಅಪಾರ. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಜತೆಗೆ, ದೇವರು, ಭಕ್ತಿ, ದಾನ-ಧರ್ಮ ಹಾಗೂ ಸೇವಾ ಗುಣ ಕಲಿಸಬೇಕು. ಮಕ್ಕಳಾದ ಸಾಹಿತ್ಯ, ಅಕ್ಷರಾ ಅದ್ಭುತವಾಗಿ ಹಾಡಿದರು. ಪಾಲಕರು ಮಕ್ಕಳಿಗೆ ಸಂಗೀತವನ್ನು ಕಲಿಸಲಿ ಎಂದರು.
ಕಾಂಗ್ರೆಸ್ ಕಾರ್ಯಕರ್ತರು ಮೋಟಮ್ಮ ಅವರನ್ನು ಸನ್ಮಾನಿಸಿದರು. ಪ್ರಮುಖರಾದ ಕಿಶೋರಿ ಬೂದನೂರ, ಜ್ಯೋತಿ ಗೊಂಡಬಾಳ, ನಾಗರತ್ನ ಹುಲಗಿ, ಮಂಜುನಾಥ ಗೊಂಡಬಾಳ, ಗಣೇಶ ಹಿಟ್ನಾಳ, ವಿಜಯಕುಮಾರ ಹುಲಗಿ, ರಾಜಾಸಾಬ ಜವಳಿ ಇತರರಿದ್ದರು.