

ಉಡುಪಿ: ಹಿಂದುಳಿದ ವರ್ಗಗಳ ಸಮುದಾಯ ಭವನಕ್ಕೆ 100 ಕೋಟಿ ರೂ. ಬಿಡುಗಡೆ ಮಾಡಿದ ಹಣವನ್ನು ವಾರದೊಳಗೆ ನೀಡಬೇಕು. ಇಲ್ಲದಿದ್ದರೆ ಹಿಂದುಳಿದ ವರ್ಗದ ಶಾಸಕರು ಮಾಜಿ ಶಾಸಕರು ಸರ್ಕಾರದ ವಿರುದ್ಧ ವಿಧಾನಸೌಧದ ಗಾಂಧಿ ಪ್ರತಿಮೆ ಎದುರು ಧರಣಿ ಮಾಡುತ್ತೇವೆ. ಇದಕ್ಕೆ ಮುಖ್ಯಮಂತ್ರಿಗಳು ಹಾಗೂ ಸಚಿವರೇ ಹೊಣೆ ಎಂದು ಮಾಜಿ ಸಚಿವ ಫೋಟೋ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದುಳಿದ ವರ್ಗವನ್ನು ಸರ್ಕಾರ ತುಂಬಾ ರ್ನಿಲಕ್ಷ್ಯ ಮಾಡುತ್ತಿದೆ. ಆಗಸ್ಟ್ ತಿಂಗಳಲ್ಲಿ ಸಮುದಾಯ ಭವನ ನಿಮಾರ್ಣಕ್ಕೆ 100 ಕೋಟಿ ರೂ. ಮೊತ್ತಕ್ಕೆ ಅನುಮೋದನೆ ಕೊಟ್ಟು ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಇದರ ಪ್ರಯೋಜನ ಇವತ್ತಿಗೂ ಸಿಗುತ್ತಿಲ್ಲ. ಸಮುದಾಯ ಭವನ ನಿರ್ಮಿಸಿ ಇಲಾಖೆಗೆ ವರದಿ ಕೊಟ್ಟರೂ ಹಣ ಬಿಡುಗಡೆ ಮಾಡಿಲ್ಲ. ಅನೇಕ ಸ್ವಾಮೀಜಿಗಳು ಮುಖಂಡರು ಈ ಬಗ್ಗೆ ಗಮನ ಸೆಳೆದಿದ್ದಾರೆ ಎಂದರು.
ರಾಜ್ಯದಲ್ಲಿ 2400 ಹಾಸ್ಟೆಲ್ ಗಳಿವೆ. 1 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲಿಗೆ ಬೇಡಿಕೆ ಇರಿಸಿದ್ದಾರೆ. ವಿದ್ಯಾರ್ಥಿ ನಿಲಯ ಇಲ್ಲದೆ ಶಿಕ್ಷಣ ಪಡೆಯಲು ಹಿಂದುಳಿದ ಮಕ್ಕಳಿಗೆ ತೊಂದರೆ ಆಗುತ್ತದೆ. ಬಿಜೆಪಿ ಸರ್ಕಾರ ಇದ್ದಾಗ 30000 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಅವಕಾಶ ಕಲ್ಪಿಸಿತ್ತು. ಆರ್ಥಿಕ ಇಲಾಖೆಯ ಅನುಮೋದನೆ ಪಡೆದು ಅವಕಾಶ ಮಾಡಿಕೊಟ್ಟಿದ್ದೆವು. ಹಿಂದುಳಿದ ವರ್ಗದ ಮಹಿಳೆಯರಿಗೆ 10,000 ಹೊಲಿಗೆ ಯಂತ್ರ ಹಂಚಲು ಯೋಜನೆ ರೂಪಿಸಿದ್ದೆವು. ಈ ಬಗ್ಗೆ ಫಲಾನುಭವಿಗಳ ಆಯ್ಕೆಯು ಆಗಿತ್ತು. ಈ ಬಗ್ಗೆ ಸರ್ಕಾರ ಗಮನ ನೀಡುತ್ತಿಲ್ಲ ಎಂದರು.
ಸಮರ್ಥನ ಆಯ್ಕೆ
ಬಹಳ ಸಮರ್ಥ, ಯುವಕ ರಾಜ್ಯಾಧ್ಯಕ್ಷರನ್ನು ಹೈಕಮಾಂಡ್ ಆಯ್ಕೆ ಮಾಡಿದೆ. ಬಿಜೆಪಿಯ ಉಪಾಧ್ಯಕ್ಷನಾಗಿ ಕೆಲಸ ಮಾಡಿದವನಿಗೆ ರಾಜ್ಯಾಧ್ಯಕ್ಷ ಪಟ್ಟ ಒಲಿದಿದೆ. ಬಿಜೆಪಿಯ ಇಡೀ ತಂಡ ವಿಜಯೇಂದ್ರ ಜೊತೆ ಒಟ್ಟಾಗಿ ನಿಲ್ಲುತ್ತದೆ. ಬಿಜೆಪಿಗೆ ಪ್ರತಿಯೊಬ್ಬ ಕಾರ್ಯಕರ್ತ ಮತ್ತು ಪಕ್ಷದ ಮುಖಂಡ ಅನಿವಾರ್ಯ. ಯಡಿಯೂರಪ್ಪ ಅವರ ಮಗ ಕೂಡ ಬಿಜೆಪಿ ಕಾರ್ಯಕರ್ತ. ಸಾಮರ್ಥ್ಯಕ್ಕೆ ಅನುಗುಣವಾಗಿ ಜವಾಬ್ದಾರಿಯನ್ನು ಕೊಡಲಾಗಿದೆ ಎಂದರು.
ಪ್ರತಿಪಕ್ಷ ನಾಯಕ ಸ್ಥಾನ ಅಕಾಂಕ್ಷಿ
ಸರ್ವವ್ಯಾಪಿ ಸರ್ವಸ್ಪರ್ಶಿ ಸಮುದಾಯ ಗಮನಲ್ಲಿಟ್ಟು ವಿಪಕ್ಷ ನಾಯಕನ ಆಯ್ಕೆ ನಡೆಯಲಿದೆ. ಪಕ್ಷ ಕಳೆದ ಬಾರಿ ನನಗೆ ವಿಪಕ್ಷ ನಾಯಕರ ಸ್ಥಾನದ ಅವಕಾಶ ಕೊಟ್ಟಿತ್ತು. ಈ ಬಾರಿ ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಗೊತ್ತಿಲ್ಲ. ಅವಕಾಶಕೊಟ್ಟರೆ ನಿಭಾಯಿಸುತ್ತೇನೆ ಎಂದು ಹೇಳಿದ್ದೇನೆ. 34 ಜನ ಮೇಲ್ಮನೆ ಸದಸ್ಯರಿದ್ದಾರೆ, ಯಾರನ್ನ ಆಯ್ಕೆ ಮಾಡಬೇಕು ಎಂದು ಪಕ್ಷ ನಿರ್ಧರಿಸುತ್ತದೆ. ಹುದ್ದೆಗಳಿಗೆ ನಿರಾಸಕ್ತಿ ಇರುವವರು ಇರೋದಿಲ್ಲ ಎಲ್ಲರಿಗೂ ಆಸಕ್ತಿ ಇರುತ್ತದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.