

ಮಂಗಳೂರಿನ ಜೆರೋಸಾ ಶಾಲೆಯ ಶಿಕ್ಷಕಿ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ ಮಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮತ್ತು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಶಾಸಕ ಭರತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದ ಕಾನೂನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಈ ಬಗ್ಗೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಶಾಸಕ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಎಚ್ಚರಿಸಿದರು.
ದೇಶ ವಿಭಜನೆಯ ಹೇಳಿಕೆ ನೀಡಿದ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ವಿರುದ್ಧ ಪ್ರಕರಣ ದಾಖಲಿಸದ ಕಾಂಗ್ರೆಸ್ ಸರ್ಕಾರ, ಬಿಜೆಪಿ ಶಾಸಕರ ವಿರುದ್ಧ ಪ್ರಕರಣ ದಾಖಲಿಸಿರುವುದು ಖಂಡನೀಯ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಬಿಜೆಪಿ ನಿರಂತರ ಹೋರಾಟ ನಡೆಸಲಿದೆ ಎಂದು ಹೇಳಿದರು.
ರಾಜ್ಯ ಬಜೆಟ್ ಮೇಲೆ ನಮಗೆ ಯಾವುದೇ ನಿರೀಕ್ಷೆ ಇಲ್ಲ. ಆಡಳಿತ ಪಕ್ಷದ ಶಾಸಕರಿಗೆ ಕಾಂಗ್ರೆಸ್ ಆಡಳಿತ ತೃಪ್ತಿ ನೀಡುತ್ತಿಲ್ಲ. ಇಂತವರು ಮಂಡಿಸುವ ಬಜೆಟ್ ಮೇಲೆ ಯಾವ ನಿರೀಕ್ಷೆಯೂ ಇಲ್ಲ. ಏನೇ ಘೋಷಣೆ ಆದರೂ ಅದು ಕೇವಲ ಪೇಪರ್ ಮೇಲೆ ಇರುತ್ತದೆ ಎಂದು ಟೀಕಿಸಿದರು.