ಟೋಲ್‌ಗೇಟ್ ನಿರ್ಮಿಸಿದರೆ ಹೋರಾಟ - ತಾಪಂ ಮಾಜಿ ಸದಸ್ಯ ಗೋವಿಂದ ನಾಯಕ ಹೇಳಿಕೆ

23-DVD-2 (Govinda)
ಗೋವಿಂದ ನಾಯಕ
Published on

ದೇವದುರ್ಗ: ತಾಲೂಕಿನ ಕಲ್ಮಲಾ ತಿಂಥಣಿ ಬ್ರಿಡ್ಜ್ ರಾಜ್ಯ ಹೆದ್ದಾರಿಯಲ್ಲಿ ಎರಡು ಟೋಲ್‌ಗೇಟ್ ನಿರ್ಮಿಸಿದರೆ ಶಾಸಕರ ನೇತೃತ್ವದಲ್ಲಿ ಕಿತ್ತೆಸೆಯುತ್ತೇವೆ ಎಂದು ತಾಪಂ ಮಾಜಿ ಸದಸ್ಯ ಗೋವಿಂದ ನಾಯಕ ಕೊತ್ತದೊಡ್ಡಿ ಎಚ್ಚರಿಸಿದರು.

ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2021ರಲ್ಲೇ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ಟೋಲ್‌ಗೇಟ್ ನಿರ್ಮಿಸಲು ಆದೇಶಿಸಿತ್ತು. ಆಗ ಕರೆಮ್ಮ ನಾಯಕ ವಿರೋಧಿಸಿದ್ದರು. ಹಲವು ಸಲ ಗುತ್ತಿಗೆದಾರರು ಶಾಸಕರ ಮನೆಬಾಗಿಲಿಗೆ ಬಂದರೂ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಆದರೆ, ಸರ್ಕಾರ, ಸಚಿವರು, ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಒತ್ತಡ ಹಾಕಿ ಟೋಲ್‌ಗೇಟ್ ಆರಂಭಿಸಲು ಹುನ್ನಾರ ನಡೆಸಲಾಗಿದೆ ಎಂದು ಆರೋಪಿಸಿದರು.

ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ತಾಲೂಕು ಅತ್ಯಂತ ಹಿಂದುಳಿದೆ. ಇಂಥ ಪ್ರದೇಶದಲ್ಲಿ ಟೋಲ್‌ಗೇಟ್ ನಿರ್ಮಾಣ ಮಾಡುವುದು ಸರಿಯಲ್ಲ. ಅಧಿಕಾರಿಗಳು ಹಾಗೂ ಕಾಂಗ್ರೆಸ್ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಟೋಲ್‌ಗೇಟ್ ರದ್ದು ಮಾಡದಿದ್ದರೆ ಶಾಸಕರ ನೇತೃತ್ವದಲ್ಲಿ ಬೃಹತ್ ಹೋರಾಟ ನಡೆಸುತ್ತೇವೆ ಎಂದರು.

ಶಾಸಕಿ ಕರೆಮ್ಮ ನಾಯಕ ವಿರುದ್ಧ ಬಿಎಸ್ಪಿ ಜಿಲ್ಲಾಧ್ಯಕ್ಷ ವೆಂಕನಗೌಡ ನಾಯಕ ವಕೀಲ ಮಾಡಿರುವ ಶೇ.47 ಕಮಿಷನ್ ಆರೋಪ ಆಧಾರ ರಹಿತವಾಗಿದ್ದು, ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಖಂಡರಾದ ರಮೇಶ ರಾಮನಾಳ, ಬಸವರಾಜ, ಮೌನೇಶ ಕರಿಗುಡ್ಡ, ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net