

ಗೋಣಿಕೊಪ್ಪಲು: 95ರ ಪ್ರಾಯದ ನಿವೃತ್ತ ಶಿಕ್ಷಕಿ ಮನೆಗೆ ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಪೆಮ್ಮಂಡ ಕೆ.ಪೊನ್ನಪ್ಪ ಭೇಟಿ ಕೊಡುವ ಮೂಲಕ ಹಿರಿಯ ಶಿಕ್ಷಕರ ಆರ್ಶೀವಾದ ಪಡೆದರು.
ಗೋಣಿಕೊಪ್ಪ ಸಮೀಪದ ಅರುವತ್ತೋಕ್ಲು ಗ್ರಾಮದಲ್ಲಿ ವಾಸವಿರುವ ಕಂಜಿತಂಡ ಸುಬ್ಬಮ್ಮ ಪೂವಯ್ಯ ಈ ಹಿಂದೆ ತೂಚಮಕೇರಿ ಸರ್ಕಾರಿ ಶಾಲೆಯಲ್ಲಿ ವಿದ್ಯಾರ್ಥಿಯಾಗಿ ನಂತರ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
1924ರಲ್ಲಿ ವೆಳ್ಳಾಲರ ಮುತ್ತು ಸ್ವಾಮಿಯವರು ತೂಚಮಕೇರಿ ಶಾಲೆಗೆ ಜಾಗ ನೀಡಿದ್ದಲ್ಲದೆ ಕಟ್ಟಡವನ್ನು ನಿರ್ಮಿಸುವ ಮೂಲಕ ಸುತ್ತಮುತ್ತಲಿನ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಸಹಕಾರಿಯಾಗಿದ್ದರು. ಈ ಶಾಲೆಯಲ್ಲಿ ಕಂಜಿತಂಡ ಸುಬ್ಬಮ್ಮ ವಿದ್ಯಾರ್ಥಿಯಾಗಿ ನಂತರ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು.
ತೂಚಮಕೇರಿ ಗ್ರಾಮದ ಪೆಮ್ಮಂಡ ಪೊನ್ನಪ್ಪನವರು ಶಾಲಾ ವಿದ್ಯಾರ್ಥಿಯಾಗಿ ಶಿಕ್ಷಕಿ ಕಂಜಿತಂಡ ಸುಬ್ಬಮ್ಮನವರಿಂದ ಪಾಠ ಪ್ರವಚನ ಆಲಿಸಿದ್ದರು. 95ರ ಪ್ರಾಯದಲ್ಲಿ ವಿದ್ಯೆ ನೀಡಿದ ಶಿಕ್ಷಕಿಯನ್ನು ಭೇಟಿ ಮಾಡುವ ಮೂಲಕ ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಹಳೆಯ ನೆನಪುಗಳನ್ನು ವಿನಿಮಯ ಮಾಡಿದ್ದಾರೆ. ಪ್ರಸ್ತುತ ಶಿಕ್ಷಕಿ ಕಂಜಿತಂಡ ಸುಬ್ಬಮ್ಮ ಅರುವತ್ತೋಕ್ಲು ತಮ್ಮ ಮಗನಾದ ಕಂಜಿತಂಡ ಪಿ.ಮಂದಣ್ಣನವರ ಮನೆಯಲ್ಲಿ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ.