ಜನ, ಜಾನುವಾರು ರಕ್ಷಣೆಗಾಗಿ ಕೂಡಲೇ ನೀರು ಹರಿಸಿ: ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯ

Ex-JDS MLA criticism against Congress Mandya
Published on

ಮಂಡ್ಯ: ಬರದಿಂದಾಗಿ ಜಿಲ್ಲೆಯಲ್ಲಿ ಜನ, ಜಾನುವಾರುಗಳು ನೀರಿಲ್ಲದೆ ಪರಿತಪಿಸುವಂತಾಗಿದೆ. ಆದ್ದರಿಂದ ಕನಿಷ್ಟ 5 ದಿನವಾದರೂ ಕೆಆರ್‌ಎಸ್ ಡ್ಯಾಂನಿಂದ ನಾಲೆಗಳಿಗೆ ನೀರು ಹರಿಸಿ ಕೆರೆ-ಕಟ್ಟೆ ತುಂಬಿಸುವ ಕೆಲಸವನ್ನು ರಾಜ್ಯಸರ್ಕಾರ ಮಾಡಬೇಕು ಎಂದು ಶ್ರೀರಂಗಪಟ್ಟಣ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಒತ್ತಾಯಿಸಿದರು.

ಕೆಆರ್‌ಎಸ್ ಡ್ಯಾಂನಲ್ಲಿ ನೀರಿದ್ದರೂ ನಾಲೆಗಳಿಗೆ ನೀರು ಹರಿಸುತ್ತಿಲ್ಲ. ಇದರಿಂದಾಗಿ ಕೆರೆ ಕಟ್ಟೆಗಳು ಒಣಗಿ ಹೋಗಿವೆ. ನಾಲ್ಕು ವರ್ಷಗಳಿಂದ ಬೆಳೆದಿರುವ ತೆಂಗು, ಅಡಿಕೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳು ಹಾಳಾಗುತ್ತಿವೆ. ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಹತ್ತು ವರ್ಷ ಹಿಂದಕ್ಕೆ ಹೋಗಿದೆ. ಪರಿಸ್ಥಿತಿ ಹೀಗಿರುವಾಗ ರೈತರ ಹಿತ ಕಾಪಾಡದ ಚಲುವರಾಯಸ್ವಾಮಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಸ್ತುತ ಅಣೆಕಟ್ಟೆಯಲ್ಲಿ 86.50 ಅಡಿ ಅಂದರೆ 13 ಟಿಎಂಸಿಗೂ ಹೆಚ್ಚು ನೀರಿದೆ. ಇದರಲ್ಲಿ ನಾಲೆಗೆ ನೀರು ಹರಿಸಲು ಕೇವಲ 2 ಟಿಎಂಸಿಯಷ್ಟು ನೀರು ಸಾಕು. 74 ಅಡಿ ಮೇಲ್ಪಟ್ಟು ನೀರಿದ್ದರೆ ಕೃಷಿ ಚಟುವಟಿಕೆಗೆ ಬಳಸಬಹುದು ಎಂಬ ಕಾನೂನು ಇದೆ. ನೀರನ್ನು ಇಟ್ಟುಕೊಂಡಿರುವುದಾದರೂ ಏಕೆ?. ತಮಿಳುನಾಡಿನವರು ನೀರು ಕೇಳಿದರೆ ಬಿಡಬೇಕೇ ಎಂದು ಪ್ರಶ್ನಿಸಿದ ಅವರು, ಐಎನ್‌ಡಿಐಎ ಒಕ್ಕೂಟದ ಮಿತ್ರ ಪಕ್ಷ ಡಿಎಂಕೆ ಮೇಕೆದಾಟು ಯೋಜನೆ ಮಾಡಲು ಬಿಡಲ್ಲ ಎಂದು ಪ್ರಣಾಳಿಕೆ ಹೊರಡಿಸಿದೆ. ಈ ಬಗ್ಗೆ ರಾಜ್ಯಸರ್ಕಾರ ಮಾತನಾಡುತ್ತಿಲ್ಲ. ನಾಲೆಗಳಿಗೆ ನೀರು ಬಿಡದ ನೀವು ಯಾವ ನೈತಿಕತೆಯಿಂದ ಜನರ ಬಳಿ ಹೋಗಿ ಮತಯಾಚನೆ ಮಾಡುತ್ತೀರಿ ಎಂದು ಟೀಕಿಸಿದರು.

ಚುನಾವಣೆ ಹಿನ್ನೆಲೆಯಲ್ಲಿ ಸರಣಿ ಸಭೆ ಮಾಡಲಾಗುತ್ತಿದೆ. ಆದರೆ ಎಂದಾದರೂ ರೈತರ ಕಷ್ಟಗಳನ್ನು ಆಲಿಸಿದ್ದೀರಾ?. ಹಾಗಿದ್ದರೆ ಪಕ್ಷದ ಸಭೆಯೇ ಮುಖ್ಯವಾಯಿತೇ?. ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದ ಗ್ಯಾರಂಟಿ ಯೋಜನೆ ಫಲಾನುಭವಿ ಸಮಾವೇಶ ಸೇರಿದಂತೆ ತಾಲೂಕುವಾರು ನಡೆದ ಸಭೆಗೆಂದು ಒಂದೇ ತಿಂಗಳಲ್ಲಿ 9 ಕೋಟಿ ರೂ ಖರ್ಚು ಮಾಡಲಾಗಿದೆ. ಸಮಾವೇಶ ನಡೆಸಲು ಸರ್ಕಾರದ ಹಣವೇ ಬೇಕಿತ್ತೇ?. 8 ತಿಂಗಳಲ್ಲಿ ನಿಮ್ಮ ಸರ್ಕಾರದ ಸಾಧನೆ ಏನು?. 20 ರೂ ಇದ್ದ ಸ್ಟಾಂಪ್ ಕಾಗದವನ್ನು 120 ರಿಂದ 150 ರೂ ಮಾಡಿದ್ದೀರಿ?. ಉಚಿತ ವಿದ್ಯುತ್ ನೆಪದಲ್ಲಿ ವಿದ್ಯುತ್ ಬಿಲ್ಲನ್ನು ದುಪ್ಪಟ್ಟು ಮಾಡಿದ್ದೀರಿ. ಶಕ್ತಿ ಯೋಜನೆಯಡಿ ಉಚಿತ ಬಸ್ ನೀಡುವ ಮೂಲಕ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸಿಗದಂತೆ ಮಾಡಿದ್ದೀರಿ, ಪುರುಷರು ಬಸ್‌ಗಳಲ್ಲಿ ಹೋಗಲಾಗುತ್ತಿಲ್ಲ. ಇದು ನಿಮ್ಮ ಸಾಧನೆಯೇ ಎಂದು ಟೀಕಿಸಿದರು.

ಶ್ರೀರಂಗಪಟ್ಟಣ ತಾಲೂಕು ಜೆಡಿಎಸ್ ಕಾರ್ಯಾಧ್ಯಕ್ಷ ತಗ್ಗಹಳ್ಳಿ ಪ್ರಸನ್ನ, ಪ್ರಧಾನ ಕಾರ್ಯದರ್ಶಿ ಶಂಕರೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net