

ತುಮಕೂರು: ಸ್ಮಾರ್ಟ್‌ಸಿಟಿ ತುಮಕೂರಿನ ಸಮಗ್ರ ಅಭಿವೃದ್ಧಿಗೆ 200 ಕೋಟಿ ರೂ., ವಿಶೇಷ ಅನುದಾನವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕು ಎಂದು ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಒತ್ತಾಯಿಸಿದರು.
ಪಾಲಿಕೆ ಆವರಣದಲ್ಲಿ ಗುರುವಾರ ವಿಪಕ್ಷ ನಾಯಕರ ಕಚೇರಿ ಉದ್ಘಾಟಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ತುಮಕೂರಿನ ಅಭಿವೃದ್ಧಿಗೆ 125 ಕೋಟಿ ರೂ.. ವಿಶೇಷ ಅನುದಾನ ನೀಡಲಾಗಿತ್ತು. ಹಣ ಬಿಡುಗಡೆ ಮಾಡುವಲ್ಲಿ ಬಿಜೆಪಿ ಸರ್ಕಾರ ಮೀನಾಮೇಷ ಎಣಿಸುತ್ತಿದೆ. ರಾಜಧಾನಿಗೆ ಉಪನಗರವಾಗಿ ಬೆಳೆಯುತ್ತಿರುವ ತುಮಕೂರಿನ ಅಭಿವೃದ್ಧಿ ಬಗ್ಗೆ ರಾಜ್ಯ ಸರ್ಕಾರ ದಿವ್ಯನಿರ್ಲಕ್ಷ್ಯವಹಿಸಿದೆ ಎಂದು ದೂರಿದರು.
ಟೀಕೆ-ಟಿಪ್ಪಣಿಗೆ ಸೀಮಿತವಲ್ಲ: ವಿರೋಧ ಪಕ್ಷವೆಂದರೆ ಬರೀ ಟೀಕೆ-ಟಿಪ್ಪಣಿ ಮಾಡುವುದೇ ಕೆಲಸವಲ್ಲ. ನಗರದ ಅಭಿವೃದ್ಧಿ ಕಾರ್ಯಗಳು ತ್ವರಿತಗತಿಯಲ್ಲಿ ನಡೆಯುವಂತೆ ಉತ್ತಮ ಸಲಹೆ-ಸಹಕಾರ ಕೊಡುವ ನಿಟ್ಟಿನಲ್ಲಿ ಪಾಲಿಕೆಯ ವಿರೋಧ ಪಕ್ಷದ ನಾಯಕರು ಹಾಗೂ ಸದಸ್ಯರು ಕೆಲಸ ಮಾಡಬೇಕು ಎಂದು ಪರಮೇಶ್ವರ ಸಲಹೆ ನೀಡಿದರು.
ಪಾಲಿಕೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರೆದಿದ್ದು ಉಭಯಪಕ್ಷಗಳ ಒಮ್ಮತದ ಪ್ರತಿನಿಧಿಯಾಗಿ ವಿಪಕ್ಷ ನಾಯಕ ಕುಮಾರ್‌ರನ್ನು ಆಯ್ಕೆ ಮಾಡಲಾಗಿದೆ. ನಗರದ ಅಭಿವೃದ್ಧಿಗೆ ಪೂರಕವಾಗಿ ಮೇಯರ್‌ಗೆ ಸಲಹೆ-ಸಹಕಾರ ನೀಡಿ ಉತ್ತಮ ಕೆಲಸ ಮಾಡಲಿ ಎಂದು ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿದರು.
ಮಾಜಿ ಶಾಸಕ ಎಸ್.ಷಫಿಅಹಮದ್, ಡಾ.ಎಸ್.ರಫೀಕ್‌ಅಹಮದ್, ಮೇಯರ್ ಬಿ.ಜಿ.ಕೃಷ್ಣಪ್ಪ, ವಿಪಕ್ಷ ನಾಯಕ ಜೆ. ಕುಮಾರ್, ಪಾಲಿಕೆ ಸದಸ್ಯರಾದ ನಯಾಜ್ ಅಹಮದ್, ಮಂಜುನಾಥ್‌ಗೌಡ, ರೂಪಾ ಶೆಟ್ಟಳ್ಳಯ್ಯ, ಪಾಲಿಕೆ ಆಯುಕ್ತೆ ರೇಣುಕಾ, ಮುಖಂಡರಾದ ಜಕ್ರಿಯಾ, ಮೆಹಬೂಬ್ ಪಾಷ, ಬೆಳ್ಳಿ ಲೋಕೇಶ್, ಇಸ್ಮಾಯಿಲ್, ರವಿಗೌಡ ಇದ್ದರು.
ಕರೊನಾ ಸಂಕಷ್ಟದಲ್ಲಿ ವೈಭೋಗ: ಕರೊನಾ ಸಂಕಷ್ಟದಲ್ಲೂ ಪಾಲಿಕೆ ವಿಪಕ್ಷ ನಾಯಕ ಕಚೇರಿ ಉದ್ಘಾಟನೆಯನ್ನು ಇಷ್ಟು ಅದ್ದೂರಿಯಾಗಿ ಆಚರಿಸಿದ್ದು ಸಾಕಷ್ಟು ಚರ್ಚೆಗೆ ಗ್ರಾಸ ಒದಗಿಸಿದೆ. ಕರೊನಾ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿತ್ತು. ವಿಪಕ್ಷ ನಾಯಕ ಕುಮಾರ್ ತಮ್ಮ ಸ್ವಂತ ಖರ್ಚಿನಲ್ಲೇ ಈ ವೈಭವಯುತ ಕಾರ್ಯಕ್ರಮ ಆಯೋಜಿಸಿದ್ದರಾದರೂ ನೂರಾರು ಬಡ ಜನರಿಗೆ ಆಹಾರ ಕಿಟ್‌ಗಳನ್ನು ವಿತರಿಸಿ ಇನ್ನೊಬ್ಬರಿಗೆ ಮಾದರಿಯಾಗುವ ಸದಾವಕಾಶ ಕಳೆದುಕೊಂಡರು. ಕಾರ್ಯಕ್ರಮದಲ್ಲಿ ಮೂರು ಪಕ್ಷದ ಹಿರಿಯ, ಕಿರಿಯ ನಾಯಕರಲ್ಲದೆ ಪುಡಾರಿಗಳ ದಂಡೇ ನೆರೆದಿತ್ತು.
ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಚಿವನಾಗಿದ್ದ ಸಂದರ್ಭದಲ್ಲಿ ನಗರದ ವಿವಿಧೆಡೆ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಹಾಕಿದ್ದೆ. ಆದರೆ, 3 ವರ್ಷವಾದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಹೊಸ ಸರ್ಕಾರ ಬಂದು 2 ವರ್ಷ ಕಳೆದಿದೆ. ಅಭಿವೃದ್ಧಿ ಕಾಮಗಾರಿಗಳು ಆಮೆಗತಿಯಲ್ಲೆ ಸಾಗುತ್ತಿವೆ. ಕಳಪೆ ಕಾಮಗಾರಿಗಳ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬಂದಿದ್ದು ಶೀಘ್ರದಲ್ಲಿ ಪ್ರತಿಪಕ್ಷ ನಾಯಕರ ಜತೆ ನಗರದ ಪ್ರದಕ್ಷಿಣೆ ಮೂಲಕ ಗುಣಮಟ್ಟ ಪರಿಶೀಲಿಸುತ್ತೇವೆ. ಡಾ.ಜಿ.ಪರಮೇಶ್ವರ್ ಮಾಜಿ ಡಿಸಿಎಂ