

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಬಂಧಿತ ಕಾಂಗ್ರೆಸ್ ಮುಖಂಡ ಬಿಬಿಎಂಪಿ ಮಾಜಿ ಸದಸ್ಯ ಅಬ್ದುಲ್ ರಕೀಬ್ ಜಾಕೀರ್‌ನನ್ನು ಡಿ.8ವರೆಗೆ ಸಿಸಿಬಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ. ರಾಜಕೀಯ ವೈಷಮ್ಯ ಹಿನ್ನೆಲೆಯಲ್ಲಿ ಗಲಭೆ ಮತ್ತು ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಮತ್ತು ಕಚೇರಿಗೆ ಬೆಂಕಿ ಹಾಕಲು ಮಾಜಿ ಮೇಯರ್ ಸಂಪತ್‌ರಾಜ್ ಜತೆ ಸಂಚು ರೂಪಿಸಿ ಜನರನ್ನು ಸೇರಿಸಿದ ಆರೋಪದಲ್ಲಿ ಜಾಕೀರ್‌ನನ್ನು ಸಿಸಿಬಿ ಪೊಲೀಸರು ಡಿ.2ರಂದು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಶುಕ್ರವಾರ ನ್ಯಾಯಾಲಯ ಮುಂದೆ ತನಿಖಾಧಿಕಾರಿಗಳು ಹಾಜರಾಗಿ ಹೆಚ್ಚಿನ ವಿಚಾರಣೆಗೆ ಆರೋಪಿ ಜಾಕೀರ್‌ನನ್ನು ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು. ಆರೋಪಿಯನ್ನು ಸಿಸಿಬಿ ಕಸ್ಟಡಿಗೆ ವಹಿಸಿ ಕೋರ್ಟ್ ಆದೇಶಿಸಿದೆ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.