

ಚಿಕ್ಕಬಳ್ಳಾಪುರ: ವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ನೆರವು ಪಡೆಯುವುದರ ಬಗ್ಗೆ ಬಹಿರಂಗವಾಗಿ ಹೇಳಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಫೋನ್ ಕರೆ ಮಾಡಿ ಬೆಂಬಲ ಕೋರಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ರಾಜ್ಯದಲ್ಲಿ 25 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ. ರಾಜಕೀಯ ಬಲಾಬಲದ ಲೆಕ್ಕಾಚಾರದಲ್ಲಿ 6 ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಿದ್ದಾರೆ. ಇದನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಬೆಂಬಲ ಪಡೆಯಲು ಯಡಿಯೂರಪ್ಪ ಉತ್ಸುಕತೆ ತೋರಿದ್ದು, ಬಹಿರಂಗವಾಗಿ ಹೇಳುವ ಮೂಲಕ ಒಳ್ಳೆಯ ರಾಜಕೀಯ ಸಂಸ್ಕೃತಿ ಪ್ರದರ್ಶಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿಲ್ಲ ಎಂದು ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ತಿಳಿಸಿದರು.
ಬೆಳೆಸಿದ ಪಕ್ಷ ಎಂಬುದನ್ನು ಮರೆತು, ಸೌಜನ್ಯವಿಲ್ಲದೆ ನಾನಾ ಹೇಳಿಕೆಗಳನ್ನು ನೀಡುತ್ತಿದ್ದಾರೆ, ಯಾರನ್ನೋ ಮೆಚ್ಚಿಸಲು ಕೇವಲ ಒಂದು ಪಕ್ಷ, ಜೆಡಿಎಸ್ ಮೇಲೆ ನಿರಂತರ ದಾಳಿ ಮಾಡುತ್ತಿದೆ. ಅಭ್ಯರ್ಥಿಯನ್ನು ಕಣಕ್ಕಿಳಿಸಿದಾಗ, ಇಲ್ಲವೇ ಸ್ಫರ್ಧೆಯಿಂದ ದೂರ ಉಳಿದಾಗಲೂ ಒಂದೊಂದು ರೀತಿಯಲ್ಲಿ ಟೀಕಿಸಲಾಗುತ್ತಿದೆ. ಇದಕ್ಕೆಲ್ಲ ಸೂಕ್ತ ಸಂದರ್ಭದಲ್ಲಿ ತಕ್ಕ ಉತ್ತರ ನೀಡುವುದಾಗಿ ಪರೋಕ್ಷವಾಗಿ ವಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಶಾಸಕ ಜಮೀರ್ ಅಹಮದ್‌ಗೆ ಟಾಂಗ್ ನೀಡಿದರು.
ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿಯ ಎಷ್ಟು ಸದಸ್ಯರಿದ್ದಾರೆ. ಇಲ್ಲಿ ಬಲವೇ ಇಲ್ಲದಿರುವ ಸಂದರ್ಭದಲ್ಲಿ ಬಿಜೆಪಿ ಏಕೆ ಅಭ್ಯರ್ಥಿಗಳನ್ನು ನಿಲ್ಲಿಸಿದೆ? ಒಳ ಒಪ್ಪಂದವೇ ಆಗಿದ್ದರೆ ಜೆಡಿಎಸ್ ಬಗ್ಗೆ ಬಿಜೆಪಿಗೆ ಮೃದು ಧೋರಣೆ ಇರಬೇಕಲ್ವಾ.? ಎಂದು ಪ್ರಶ್ನಿಸಿದರು.
ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಮಂಜೂರಾತಿಗೆ ಕಮಿಷನ್ ಕೊಡಬೇಕೆಂಬುದನ್ನು ಬಿಜೆಪಿ ನಾಯಕರೇ ಹೊರ ಹಾಕಿದ್ದಾರೆ. ಇದರಿಂದ ಮುಜುಗರ ತಪ್ಪಿಸಿಕೊಳ್ಳಲು ಸಿಎಂ ಸಮಗ್ರ ತನಿಖೆ ಕೈಗೊಳ್ಳುವುದಾಗಿ ಹೇಳಿದ್ದಾರೆ. ಆದರೆ, ಏನು ಕ್ರಮ ಕೈಗೊಳ್ಳಲಾಗುತ್ತದೆ. ಈಗಾಗಲೇ ಎಸಿಬಿ ನಿರಂತರ ದಾಳಿ ನಡೆಸುತ್ತಿದೆ. ಆದರೆ, ಎಷ್ಟು ಕಾರ್ಯಾಚರಣೆಯಲ್ಲಿ ದೊಡ್ಡ ಮಟ್ಟದ ಯಾವುದಾದರೂ ತಪ್ಪಿತಸ್ಥ ಅಧಿಕಾರಿಗೆ ಶಿಕ್ಷೆಯಾಗಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಎತ್ತಿನಹೊಳೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರರಿಗೆ ಹಣ ಕೊಡುವುದರಲ್ಲಿ ಕಮಿಷನ್ ಸಿಗುತ್ತದೆ. ಆದರೆ, ಭೂ ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಹಣ ಕೊಡಲು ಹೊಟ್ಟೆ ನೋವು ಬರುತ್ತದೆ ಎಂದು ಲೇವಡಿ ಮಾಡಿದ ಎಚ್ಡಿಕೆ, ತೆರೆದ ಕಾಲುವೆಯಲ್ಲಿ ನೂರಾರು ಕಿ.ಮೀಯಿಂದ ನೀರು ಹರಿಸಲು ಸಾಧ್ಯವೇ? ಆ ಭಾಗದ ರೈತರು ಸುಮ್ಮನಿರುತ್ತಾರೆಯೇ? ಎಂದು ಪ್ರಶ್ನಿಸಿದರು.
ವಿಧಾನ ಪರಿಷತ್ ಜೆಡಿಎಸ್ ಅಭ್ಯರ್ಥಿ ವಕ್ಕಲೇರಿ ರಾಮಣ್ಣ, ವಿಧಾನಪರಿಷತ್ ಸದಸ್ಯ ಗೋವಿಂದರಾಜು, ಮಾಜಿ ಶಾಸಕರಾದ ಕೆ.ಪಿ.ಬಚ್ಚೇಗೌಡ, ವೆಂಕಟಶಿವಾರೆಡ್ಡಿ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಕೆ.ಎಂ.ಮುನೇಗೌಡ, ಮುಖಂಡರಾದ ಮೇಲೂರು ರವಿಕುಮಾರ್, ಸಿ.ಆರ್.ನರಸಿಂಹಮೂರ್ತಿ ಮತ್ತಿತರರು ಇದ್ದರು.
ಚುನಾವಣೆಗಳ ಅಧ್ಯಯನ, ರಣತಂತ್ರ: ಬಿಜೆಪಿ ಮತ್ತು ಕಾಂಗ್ರೆಸ್ ಸಖ್ಯದಿಂದಲೇ ತಾವೆಲ್ಲರೂ ಹಾಳಾಗಿದ್ದು ಇತ್ತೀಚಿನ ಚುನಾವಣೆಗಳಲ್ಲಿ ಜೆಡಿಎಸ್ ಬಲ ಕುಸಿಯಲು ಕಾರಣವಾಗಿರುವುದರ ಬಗ್ಗೆ ಅಧ್ಯಯನ ನಡೆಸಲಾಗಿದೆ. ವಿಶೇಷವಾಗಿ ಸಮ್ಮಿಶ್ರ ಸರ್ಕಾರ ಪತನದ ಸಂದರ್ಭದಲ್ಲಿನ ಆಪರೇಷನ್ ಕಮಲದಿಂದ ನಡೆದ ಉಪ ಸಮರದ ತಂತ್ರಗಳನ್ನು ತಿಳಿದುಕೊಳ್ಳಲಾಗಿದೆ. ಇದಕ್ಕೆ ಪೂರಕವಾಗಿ ಪಕ್ಷ ರಣ ನೀತಿಗಳನ್ನು ರೂಪಿಸಲಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
ಭೂಕಂಪನಕ್ಕೆ ಪರಿಹಾರ ಅಗತ್ಯ: ರಾಜ್ಯದಲ್ಲಿ ನಿರಂತರ ಭೂ ಕಂಪನದ ಅನುಭವ ಹೆಚ್ಚಳದ ಹಿನ್ನೆಲೆಯಲ್ಲಿ ಸರ್ಕಾರವು ಎಚ್ಚೆತ್ತುಕೊಳ್ಳಬೇಕು. ಗಣಿಗಾರಿಕೆ ಸ್ಫೋಟವೋ? ಪ್ರಾಕೃತಿಕ ಅಸಮತೋಲನವೋ ಎಂಬುದನ್ನು ಖಾತ್ರಿಪಡಿಸಿಕೊಂಡು ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು. ಶುಕ್ರವಾರ ಬೆಳಗ್ಗೆ ರಾಮನಗರದ ತೋಟದಿಂದ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಜೋರು ಶಬ್ಧವಾಗಿ ಕಂಪಿಸಿದಂತಹ ಅನುಭವವಾಯಿತು. ಇದಕ್ಕೆ ಮೊದಲು ಗಣಿಗಾರಿಕೆಯ ಶಬ್ದ ಎಂತಲೇ ಭಾವಿಸಲಾಗಿತ್ತು. ಆದರೆ, ಬೇರೆ ಬೇರೆ ಕಡೆ ಭೂಮಿ ಕಂಪಿಸಿದ ಮಾಹಿತಿ ಸಿಕ್ಕಿತ್ತು ಎಂದರು.
ಮೊಯ್ಲಿ ಮನೆಗೆ ಹೋಗಬೇಕಾಗಿತ್ತು...
2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಕಣಕ್ಕಿಳಿಯದಿದ್ದಲ್ಲಿ ಬಿಜೆಪಿ ಬಚ್ಚೇಗೌಡ ಗೆಲ್ಲುತ್ತಿದ್ದರು. ಆಗಲೇ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಮನೆಗೆ ಹೋಗುತ್ತಿದ್ದರು. ಇದು 2019ರ ಚುನಾವಣೆಯಲ್ಲಿ ಗೊತ್ತಾಗಿದೆ. ಅವರಿಗೆ ಕಾಂಗ್ರೆಸ್ ನಾಯಕರೇ ದೇಶದ ಮಹಾನ್ ಸುಳ್ಳುಗಾರ ಎಂಬ ಬಿರುದು ನೀಡಿದ್ದಾರೆ. ಹಲವು ವರ್ಷಗಳಿಂದಲೂ ಜಪ ಮಾಡುತ್ತಿದ್ದರೂ ಎತ್ತಿನಹೊಳೆ ಯೋಜನೆ ಅಭಿವೃದ್ಧಿ ಕೆಲಸ ಉಗಮ ಸ್ಥಾನದಲ್ಲಿಯೇ ಉಳಿದಿದೆ ಎಂದು ಎಚ್ಡಿಕೆ ವ್ಯಂಗ್ಯವಾಡಿದರು.
ತಟಸ್ಥ ನಿಲುವ ಅನಿವಾರ್ಯ: ಸರ್ಕಾರದ ವಿರುದ್ಧ ಸೈದ್ಧಾಂತಿಕ ಹೋರಾಟ ಮಾಡಿದ ಸಂದರ್ಭದಲ್ಲಿ ವೀರಶೈವ ಇಲ್ಲವೇ ಕುರುಬ ನಾಯಕರಿಗೆ ಕಿರುಕುಳ ಕೊಡಲಾಗುತ್ತಿದೆ ಎಂಬುದಾಗಿ ಆರೋಪಿಸಲಾಯಿತು. ಇದರ ಲಾಭ ಒಮ್ಮೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಿಕ್ಕಿದೆ. ಎಲ್ಲಿಯವರೆಗೂ ಜಾತಿ ವ್ಯವಸ್ಥೆ ಇರುತ್ತದೆಯೋ ಅಲ್ಲಿಯವರೆಗೂ ಹೋರಾಟಗಳಿಗೆ ಬೆಲೆ ಇಲ್ಲದಂತಾಗಿದೆ. ಇದಕ್ಕೆ ಅನಿವಾರ್ಯವಾಗಿ ತಟಸ್ಥ ಧೋರಣೆ ತೋರಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಕೆಲಸಗಳು ಮತ ಬ್ಯಾಂಕ್‌ಗಳಾಗಿ ಪರಿವರ್ತನೆಯಾಗುತ್ತಿಲ್ಲ. ಕೇವಲ ಜಾತಿ ರಾಜಕಾರಣ, ವಿವಾದದ ವಿಚಾರಗಳು ಪ್ರಭಾವ ಬೀರುತ್ತಿವೆ. ಚುನಾವಣೆ ಬದ್ಧತೆಗಳು ಬದಲಾಗಿವೆ ಎಂದು ಕುಮಾರಸ್ವಾಮಿ ಅಸಹಾಯಕತೆ ವ್ಯಕ್ತಪಡಿಸಿದರು.