

ನೊಣವಿನಕೆರೆ: ಇತ್ತೀಚಿನ ದಿನಗಳಲ್ಲಿ ಜನರು ದೇವರ ಆರಾಧನೆಯ ಜತೆಗೆ ತಂದೆ-ತಾಯಿ, ಗುರು-ಹಿರಿಯರಿಗೆ ಗೌರವ ನೀಡುವ ಸಂಸ್ಕೃತಿ ಮರೆಯುತ್ತಿರುವ ಪರಿಣಾಮ ಪ್ರಾಕೃತಿಕ ವಿಕೋಪಗಳ ಮೂಲಕ ದೇವರು ಎಚ್ಚರಿಕೆ ನೀಡುತ್ತಿದ್ದಾನೆ ಎಂದು ಮಾಜಿ ಸಿಎಂ, ಶಾಸಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ತಿಪಟೂರು ತಾಲೂಕು ನೊಣವಿನಕೆರೆ ಹೋಬಳಿ ನೆಲ್ಲಿಕೆರೆ ಗ್ರಾಮದ ಮಹಾಶಕ್ತಿ ಕೆಂಪಮ್ಮ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಏರ್ಪಾಡಾಗಿದ್ದ ರಥಾಧಿವಾಸ, ರಥಪ್ರತಿಷ್ಠೆ, ರಥಾಂಗ ಹೋಮ, ರಥಾರೋಹಣ ಮತ್ತಿತರ ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ಮಾತನಾಡಿದರು. ಇದನ್ನು ಅರಿತು ಜನರು ಹಿಂದಿನ ಆಚರಣೆಗಳ ಜತೆಗೆ ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸುವ ಮೂಲಕ ಅವರೆಲ್ಲರಲ್ಲೂ ದೇವರನ್ನು ಕಾಣುವ ಸಂಕಲ್ಪ ಮಾಡಬೇಕು. ತನ್ಮೂಲಕ ನಾಡು-ನುಡಿ, ಸಂಸ್ಕೃತಿ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಸಹಬಾಳ್ವೆಗೆ ಸಾಕ್ಷಿ:ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾತನಾಡಿ, ಸನಾತನ ಕಾಲದಿಂದ ಹಿಂದು ಸಂಸ್ಕೃತಿಯಲ್ಲಿ ಶಕ್ತಿದೇವತೆಗಳ ಆರಾಧನೆಗೆ ಪ್ರಾಮುಖ್ಯತೆ ನೀಡಲಾಗಿದೆ. ಜಾತಿ, ಧರ್ಮದ ಭೇದಭಾವವಿಲ್ಲದೆ ಎಲ್ಲ ವರ್ಗಗಳ ಜನರು ಒಟ್ಟಾಗಿ ಜಾತ್ರೆಗಳನ್ನು ಆಚರಿಸಲಾಗುತ್ತದೆ. ಮಾನಸಿಕ ನೆಮ್ಮದಿಯ ಜತೆಗೆ ಸಮಾಜದಲ್ಲಿ ಸಹಬಾಳ್ವೆಗೆ ಇಂಥ ಆಚರಣೆಗಳು ಸಾಕ್ಷಿಯಾಗಿವೆ ಎಂದು ಹೇಳಿದರು. ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಗ್ರಾಮದ ಬಸ್ ನಿಲ್ದಾಣದಿಂದ ದೇವಸ್ಥಾನದವರೆಗೆ ತೆರೆದ ವಾಹನದ ಮೆರವಣಿಗೆಯಲ್ಲಿ ಕರೆತಂದಿದ್ದು ವಿಶೇಷವಾಗಿತ್ತು.
ತಿಪಟೂರು ಕೆರೆಗೋಡಿ ರಂಗಾಪುರ ಮಠದ ಶ್ರೀ ಗುರುಪರ ದೇಶಿಕೇಂದ್ರ ಸ್ವಾಮೀಜಿ, ಕುಪ್ಪೂರು ತಮ್ಮಡಿಹಳ್ಳಿ ಮಠದ ಡಾ. ಶ್ರೀ ಅಭಿನವ ಮಲ್ಲಿಕಾರ್ಜುನ ದೇಶಿಕೇಂದ್ರ ಸ್ವಾಮೀಜಿ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಎಂ.ಟಿ.ಕೃಷ್ಣಪ್ಪ, ಕಾಂಗ್ರೆಸ್ ಮುಖಂಡ ಕೆ.ಟಿ. ಶಾಂತಕುಮಾರ್ ಮತ್ತಿತರರಿದ್ದರು.