

ಬಿಡದಿ: ಮತಾಂತರ ನಿಷೇಧ ಕಾಯ್ದೆ ವಿರುದ್ಧ ಜೆಡಿಎಸ್ ಶಾಸಕರು ಮತ ಚಲಾಯಿಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಬಿಡದಿ ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ನಿಷೇಧ ಕಾನೂನಿನ ವಿರುದ್ಧ ನಿಲುವು ವ್ಯಕ್ತಪಡಿಸಿದ್ದರಿಂದ ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ನಾಯಕರ ಮುಖಕ್ಕೆ ಮಂಗಳಾರತಿ ಮಾಡಿದ್ದಾರೆ. ಇದೇ 2013ರಲ್ಲಿ ಸಿದ್ದರಾಮಯ್ಯ ಮತಾಂತರ ಕಾಯ್ದೆ ಜಾರಿಗೆ ತರಲು ಹೊರಟಿದ್ದರು. ಆದರೆ ಇಂದು ಮತಾಂತರದ ವಿರುದ್ಧ ಹೋರಾಟ ಮಾಡಲು ಮುಂದಾಗಿದ್ದಾರೆ. ಯಾವ ಮುಖ ಇಟ್ಟುಕೊಂಡು ವಿಧಾನಸಭೆಯಲ್ಲಿ ಚರ್ಚೆ ಮಾಡ್ತಾರೆ ಎಂದು ಕಿಡಿಕಾರಿದರು.
ಗೋಹತ್ಯೆ ನಿಷೇಧ ತಂದಾಗ ವಿಧಾನ ಪರಿಷತ್‌ನಲ್ಲಿ ವಾಕೌಟ್ ಮಾಡಿದ್ದು ಇದೇ ಕಾಂಗ್ರೆಸ್‌ನವರು. ಹಾಗಾಗಿ ಎರಡು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಒಂದೇ ಮುಖದ ನಾಣ್ಯಗಳು ಎಂದ ಅವರು, ಈಗಾಗಲೇ ಕಾಂಗ್ರೆಸ್ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರುತ್ತೇವೆಂದು ಬೀಗುತ್ತಿದೆ. ಅವರಿಗೆ ಜನತೆ ತಕ್ಕ ಪಾಠ ಕಲಿಸುತ್ತಾರೆ. ನೀರಾವರಿ ಅಭಿವೃದ್ಧಿಗೆ ವರ್ಷಕ್ಕೆ 10 ಸಾವಿರ ಕೋಟಿ ರೂಪಾಯಿ ನೀಡುವ ಆಶ್ವಾಸನೆ ನೀಡಿದ ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಿಂದ ಕೇವಲ ಎಂಟು ಸಾವಿರ ಕೋಟಿ ನೀಡಿದ್ದಾರೆ. ಇಷ್ಟಾದರೂ ರೈತರ ಹೊಲಗಳಿಗೆ ನೀರು ಹರಿಸಿಲ್ಲ. ಈಗ ಕನಕಪುರದಿಂದ ಮೇಕೆದಾಟು ಪಾದಯಾತ್ರೆ ಮಾಡುತ್ತೇವೆ ಎಂದು ಜನರನ್ನು ನಂಬಿಸಲು ಹೊರಟಿದ್ದಾರೆ. ಇದು ಯಾವ ಪುರುಷಾರ್ಥಕ್ಕೆ ಎಂದು ಕಾಂಗ್ರೆಸ್ಸಿಗರೇ ಹೇಳಬೇಕು ಎಂದರು.
ದೇವೇಗೌಡರು ನೀರಾವರಿ ಮಂತ್ರಿಗಳಾಗಿ ರಾಜ್ಯಕ್ಕೆ ನೀಡಿದ ಕೊಡುಗೆಯನ್ನು ಯಾವುದೇ ಸರ್ಕಾರ ಬಂದರೂ ಅದನ್ನು ಮೀರಿಸಲು ಸಾಧ್ಯವಿಲ್ಲ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಜೆಡಿಎಸ್ ಬದ್ಧವಾಗಿದೆ. ರಾಜ್ಯಪಾಲರಿಗೆ ಈ ಬಗ್ಗೆ ಈಗಾಗಲೇ ಮನವಿ ಮಾಡಲಾಗಿದೆ. ಎರಡು ರಾಷ್ಟ್ರೀಯ ಪಕ್ಷಗಳಿಂದ ಮೇಕೆದಾಟು ಅನುಷ್ಠಾನ ಮಾಡಲು ಸಾಧ್ಯ ಇಲ್ಲ. ಕಾಂಗ್ರೆಸ್ ನಡಿಗೆ ಕೃಷ್ಣೆ ಕಡೆಗೆ ಅಂತಾ 2013ರಲ್ಲಿ ಪಾದಯಾತ್ರೆ ನಡೆಸಿದ್ದರು. ಅಲ್ಲಿನ ರೈತರಿಗೆ ನೀರು ಸಿಕ್ಕಿದೆಯೇ, ಯಾವುದೋ ಗುತ್ತಿಗೆದಾರರಿಗೆ ಕೆನಾಲ್‌ನ ಯೋಜನೆ ನೀಡಿ ದುಡ್ಡು ಹೊಡೆದಿದ್ದಾರೆ. ಇದೀಗ ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದಾರೆ. ಮೇಕೆದಾಟು ಮಾಡದಿದ್ದರೆ ನಾವು ಪಾದಯತ್ರೆ ಆರಂಭ ಮಾಡುತ್ತೇವೆ ಎಂದು ಹೇಳಿದ್ದೆವು. ಇದೀಗ ಅದನ್ನು ಕಾಂಗ್ರೆಸ್ಸಿಗರು ಹೈಜಾಕ್ ಮಾಡಿ ಪಾದಯಾತ್ರೆಯನ್ನು ರಾಜಕೀಯವಾಗಿ ಉಪಯೋಗಿಸಿಕೊಳ್ಳಲು ಹೊರಟಿದ್ದಾರೆ ಎಂದು ಕಾಂಗ್ರೆಸ್ ಪಾದಯಾತ್ರೆ ವಿರುದ್ದ ಹರಿಹಾಯ್ದರು.