ಕಬ್ಬಿನ ಸಮಸ್ಯೆ ಪರಿಹಾರಕ್ಕೆ ಸಿಎಂ ಮಧ್ಯಪ್ರವೇಶಿಸಲಿ,  ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹ

IMG_20241110_104126_685.jpg
Published on

ಹುಬ್ಬಳ್ಳಿ: ಪ್ರತಿ ಟನ್ ಕಬ್ಬಿಗೆ ಸರ್ಕಾರವೇ 200 ರೂ. ನೀಡಲಿ, ಮಿಕ್ಕಿದ್ದನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಕೊಡಲು ಸೂಚಿಸಿ ಒಟ್ಟು 3500 ರೂ. ದರ ನಿಗದಿ ಮಾಡಬೇಕು, ಇದಕ್ಕಾಗಿ ಕೂಡಲೇ ಸಿಎಂ ಮಧ್ಯಪ್ರವೇಶ ಮಾಡಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.

ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಕಬ್ಬಿನ ದರ ಕಡಿಮೆ ಇದೆ. ದರ ನಿಗದಿ ಮಾಡುವ ಅಧಿಕಾರ ಸರ್ಕಾರಕ್ಕೆ ಇದೆ. ಬಿಜೆಪಿ ಸರ್ಕಾರ ಈ ಕೆಲಸ ಮಾಡಿತ್ತು. ಕೂಡಲೇ ಸಕ್ಕರೆ ಕಾರ್ಖಾನೆ ಮಾಲಿಕರನ್ನು ಕರೆದು ಮಾತನಾಡಬೇಕು ಎಂದರು.

ವಿಪರ್ಯಾಸವೆಂದರೆ ರೈತರು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ. ಮಂತ್ರಿಗಳು ಅಸಡ್ಡೆ ಭಾವನೆ ತಾಳಿದ್ದಾರೆ. ಈ ಹಿಂದೆ ರೈತ ಬಂಡಾಯವಾದಾಗ ಸರ್ಕಾರವೇ ಬಿದ್ದು ಹೋದ ಉದಾಹರಣೆ ಇದೆ. ಹಾಗಾಗಿ ಅಂತಹ ಸನ್ನಿವೇಶಕ್ಕೆ ದಾರಿ ಮಾಡಿಕೊಡಬಾರದು. ಯಾವುದೇ ಪಕ್ಷದವರಿರಲಿ ರೈತರು ಉಳಿದರೆ ನಿಮ್ಮ ಕಾರ್ಖಾನೆ ಉಳಿಯಲಿದೆ. ಸರ್ಕಾರ ಹಾಗೂ ಮಂತ್ರಿಗಳು ಎಚ್ಚೆತ್ತುಕೊಂಡು ಕಬ್ಬು ಬೆಳೆಗಾರರ ಸಮಸ್ಯೆ ಬಗೆ ಹರಿಸಬೇಕು ಎಂದರು.

ಸೋಲಿನ ಸಂಕೇತ:
ಹರಿಯಾಣದಲ್ಲಿ ಮತಗಳುವು ಬಗ್ಗೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ಇದು ಸೋಲಿನ ಸಂಕೇತ, ಹಾಗಾಗಿ ಮತ್ತೆ ಕುಂಟು ನೆಪ ತಯಾರು ಮಾಡುತ್ತಿದ್ದಾರೆ. ಕುಣಿಯಲು ಬಾರದವ ನೆಲ ಡೊಂಕು ಎಂದಂತೆ ರಾಹುಲ್ ಆಡುತ್ತಿದ್ದಾರೆ ಎಂದರು.

ಹುಬ್ಬಳ್ಳಿಯ ಜಯದೇವ ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭವಾಗಿ ಮೂರು ವರ್ಷ ಕಳೆದಿವೆ. ಅನುದಾನ ಕೊರತೆಯಿಂದ ಹಿನ್ನಡೆಯಾಗಿದೆ. ಕೂಡಲೇ ಸರ್ಕಾರ ನೂರು ಕೋಟಿ ರೂ. ಬಿಡುಗಡೆ ಮಾಡಿ ಮೊದಲ ಹಂತ ಪೂರ್ಣಗೊಳಿಸಬೇಕು ಎಂದು ಮಾಜಿ ಸಿಎಂ ಒತ್ತಾಯಿಸಿದರು.

ಗೆದ್ದರೆ ಎಲ್ಲವೂ ಸರಿ:
ತಾವು ಗೆದ್ದರೆ ಎಲ್ಲವೂ ಸರಿ, ಇಲ್ಲದಿದ್ದರೆ ಇಲ್ಲ ಎನ್ನುವ ಮನೋಭಾವ ಸರಿಯಲ್ಲ ಎಂದು ಮತಗಳುವು ಬಗ್ಗೆ ರಾಹುಲ್ ಗಾಂಧಿ ಅವರು ಮಾಡಿರುವ ಆರೋಪಕ್ಕೆ ಸಂಸದ ಹಾಗೂ ಜಯದೇವ ಹೃದ್ರೋಗ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿ.ಎನ್. ಮಂಜುನಾಥ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹಳಷ್ಟು ವಿಧಾನಸಭೆ ಕ್ಷೇತ್ರದಲ್ಲಿ ಅವರ ಪಕ್ಷ ಗೆದ್ದಿದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಮತದಾರರ ಒಲವು ಬೇರೆಬೇರೆ ಆಗಿರುತ್ತದೆ. ಅದನ್ನು ತಿಳಿದುಕೊಳ್ಳದೇ ಅಪಪ್ರಚಾರ ಮಾಡುವುದು ಸರಿಯಲ್ಲ. ಮತಗಳುವು ಬಗ್ಗೆ ಸಮರ್ಪಕ ದಾಖಲೆ ಇದ್ದರೆ ಕೊಡಿ ಎಂದು ಚುನಾವಣೆ ಆಯೋಗ ಆಗಲೇ ಹೇಳಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net