ಕುಂಟು ನೆಪ ಹೇಳುವುದನ್ನು ಬಿಡಲಿ

BOMMAI
Published on

ಹುಬ್ಬಳ್ಳಿ: ರಾಜ್ಯ ಸರ್ಕಾರ ಕುಂಟು ನೆಪ ಹೇಳುವುದನ್ನು ಬಿಟ್ಟು ತನ್ನ ಅಧಿಕಾರ ಬಳಸಿಕೊಂಡು ಕೂಡಲೇ ಬರ ಪೀಡಿತ ತಾಲೂಕುಗಳನ್ನು ಘೊಷಣೆ ಮಾಡಲಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆಗ್ರಹಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಘೊಷಣೆಗೆ ಕೇಂದ್ರ ಸರ್ಕಾರದ ಮಾನದಂಡಗಳು ಈ ಹಿಂದೆಯೇ ಇದ್ದವು. ನಾವು ಅಧಿಕಾರದಲ್ಲಿ ಇದ್ದಾಗ ಅತಿವೃಷ್ಟಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೊಟ್ಟಿದ್ದಕ್ಕಿಂತ ಹೆಚ್ಚಿನ ಪರಿಹಾರ ನೀಡಿದ್ದೆವು. ಈ ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯನವರು ಬರ ಘೊಷಣೆ ಮಾಡಿರಲಿಲ್ಲವೇ ಎಂದು ಪ್ರಶ್ನಿಸಿದರು.

ಎನ್​ಡಿಆರ್​ಎಫ್​ನಿಂದ ಮೊದಲ ಕಂತಿನ ಹಣ ಬಿಡುಗಡೆಯಾಗಿದೆ. ಕುಂಟು ನೆಪ ಹೇಳುತ್ತಿರುವ ರಾಜ್ಯ ಸರ್ಕಾರಕ್ಕೆ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಮನಸ್ಸಿಲ್ಲ ಎಂದು ದೂರಿದರು.

ರಾಜಕಾರಣ ನಿಂತ ನೀರಲ್ಲ. ಕೆಲವು ಉದ್ದೇಶಕ್ಕಾಗಿ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದಿಂದ ದುರಾಡಳಿತ ಹೆಚ್ಚಾಗಿದೆ. ಒಂದು ಕಡೆ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಮತ್ತೊಂದು ಕಡೆ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ವಿರೋಧ ಪಕ್ಷದ ಜವಾಬ್ದಾರಿಯಾಗಿದೆ. ವಿರೋಧ ಪಕ್ಷಗಳು ಒಟ್ಟಿಗೆ ಹೋರಾಟ ಮಾಡಬೇಕೆಂಬುದು ರಾಜ್ಯದ ಜನರ ಅಪೇಕ್ಷೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹತ್ತಿರ ಬರುತ್ತಿದ್ದೇವೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ವಿಚಾರದಲ್ಲಿ ಮುಂದಿನ ದಿನಗಳಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಖಾಸಗಿ ಬಸ್ ಮಾಲೀಕರ ಸಮಸ್ಯೆ ಬಗೆಹರಿಸುತ್ತೇವೆ ಎಂದು ಸರ್ಕಾರ ಹೇಳಿತ್ತು. ಅವರೊಂದಿಗೆ ತೋರಿಕೆಗೆ ಮೀಟಿಂಗ್ ಮಾಡಿದರು. ಈಗ ಖಾಸಗಿ ಬಸ್ ಮಾಲೀಕರು ಸರ್ಕಾರ ಮೇಲೆ ವಿಶ್ವಾಸ ಕಳೆದುಕೊಂಡು ಮುಷ್ಕರ ನಡೆಸುತ್ತಿದ್ದಾರೆ. ಈಗಲಾದರೂ ಸರ್ಕಾರ ಎಚ್ಚೆತ್ತು ಖಾಸಗಿ ಬಸ್ ಮಾಲೀಕರ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net