ಜೆಸಿಎಂ ಭೇಟಿ ನೆಪದಲ್ಲಿ ಕೈ ಅಭ್ಯರ್ಥಿ ಎಸ್ಪಿಎಂ ಉರುಳಿಸಿದ ದಾಳ !

JCM_SPM
Published on

ತುಮಕೂರು: ಲೋಕ ಸಮರ ಜಿದ್ದಾಜಿದ್ದಿನ ಅಖಾಡದಲ್ಲಿ ಕಾಂಗ್ರೆಸ್ ಹೊಸ ದಾಳ ಉರುಳಿಸಿದೆ. ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ವಿರುದ್ಧ ಮುನಿಸಿಕೊಂಡಿರುವ ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಅವರನ್ನು ‘ಕೈ’ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡ ಭಾನುವಾರ ಭೇಟಿ ಮಾಡಿ ಚುನಾವಣೆಯಲ್ಲಿ ಬೆಂಬಲಿಸುವಂತೆ ಸಹಕಾರಿ ಕೋರಿದ್ದಾರೆ. ಇದೊಂದು ಸೌಜನ್ಯದ ಭೇಟಿ ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಬೇಡ. ಅಭ್ಯರ್ಥಿ ಆದವರು ಬೆಂಬಲ ಕೋರುವುದು ಸಹಜ. ನಾವು ಬೇರೆ ಪಕ್ಷದಲ್ಲಿರುವುದರಿಂದ ಅವರನ್ನು ಬೆಂಬಲಿಸಕ್ಕೆ ಸಾಧ್ಯವಾ ಎಂಬ ವಾದವನ್ನು ಮಾಧುಸ್ವಾಮಿ ಮುಂದಿಟ್ಟಿದ್ದಾರೆ.

ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ.ಪುರದಲ್ಲಿರುವ ಮಾಧುಸ್ವಾಮಿ ನಿವಾಸಕ್ಕೆ ಭೇಟಿ ನೀಡಿದ ಮುದ್ದಹನುಮೇಗೌಡ ಚುನಾವಣೆಯಲ್ಲಿ ಬೆಂಬಲಿಸುವಂತೆ ಸಹಕಾರ ಕೋರುವ ಮೂಲಕ ಬಿಜೆಪಿಯಲ್ಲಿನ ಬಂಡಾಯದ ಲಾಭ ಪಡೆಯುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಮನೆಗೆ ಬಂದ ಅತಿಥಿಯನ್ನು ಸೌಜನ್ಯಯುತವಾಗಿ ಬರಮಾಡಿಕೊಂಡ ಮಾಧುಸ್ವಾಮಿ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡರು.

ಸೀನಿಯರ್ ಮೋಸ್ಟ್ ಲೀಡರ್ !: ಹೂಗುಚ್ಛ ನೀಡಲು ಬಂದ ಮುದ್ದಹನುಮೇಗೌಡರಿಗೆ ನಯವಾಗೇ ಇದೆಲ್ಲಾ ನನಗೇಕೆ ತಂದಿದ್ದೀರಾ ಎಂದ ಮಾಧುಸ್ವಾಮಿ ಅವರನ್ನು ಕುರಿತು ‘ಒಂದು ಮಾತು ಹೇಳಲಾ ಸಾರ್... ನೀವು ‘ರಾಜ್ಯದ ಹಿರಿಯ ನಾಯಕರಲ್ಲೊಬ್ಬರು’ (ಸೀನಿಯರ್ ಮೋಸ್ಟ್ ಲೀಡರ್), ಇದರಲ್ಲಿ ಗೌರವ ತೋರುವ ಉದ್ದೇಶವಷ್ಟೇ ಇದೆ. ಬೇರೆ ಇನ್ನೇನು ನಿಮ್ಮ ಬಳಿ ಬಯಸುವುದಿಲ್ಲ ಎನ್ನುವ ಸ್ಪಷ್ಟನೆ ಕೊಟ್ಟರು. ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಕೇಶವಮೂರ್ತಿ, ಬರಕನಾಳು ವಿಶ್ವನಾಥ್, ಸಿದ್ದಲಿಂಗ ಸ್ವಾಮಿ, ರವಿ ಮತ್ತಿತರರು ಇದ್ದರು.

ಬೇರೆ ಪಕ್ಷದವರಿಗೆ ಸಪೋರ್ಟ್ ಮಾಡಲಿಕ್ಕೆ ಆಗುತ್ತಾ? ಒಬ್ಬ ಅಭ್ಯರ್ಥಿಯಾಗಿ ನಮ್ಮ ಮನೆಗೆ ಬಂದಿದ್ದಾರೆ. ನಾವು ಅವರು ಬಹಳ ಹಳೇಯ ಸ್ನೇಹಿತರು. ಇಬ್ಬರು ಒಟ್ಟಿಗೆ ಶಾಸಕರಾಗಿದ್ದವರು. ಸ್ನೇಹಿತರು ಅಂತ ಮನೆಗೆ ಬಂದಾಗ ವಿಶೇಷ ಅರ್ಥ ಕಲ್ಪಿಸುದು ಬೇಡ. ಇದೊಂದು ಸೌಜ್ಯನ್ಯಯುತ ಭೇಟಿ. ಲೋಕ ಚುನಾವಣೆಯ ಅಭ್ಯರ್ಥಿ ಆದವರು ಸಹಜವಾಗಿ ಬೆಂಬಲ ನೀಡುವಂತೆ ಕೇಳಿದ್ದಾರೆ. ನಾವು ಬೇರೆ ಪಕ್ಷದಲ್ಲಿ ಇರುವವರಿಗೆ ಸಪೋರ್ಟ್ ಮಾಡಲಿಕ್ಕೆ ಆಗುತ್ತಾ? ಹಾಗಾಗಿ, ಯಾವುದೇ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿಲ್ಲ ಎಂದು ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ರಾಜಕೀಯ ದಾಳ ? ಈ ಹಿಂದೆ 2019ರಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವೇಳೆ ಹೈಕಮಾಂಡ್‌ಗು ಸಡ್ಡು ಹೊಡೆದಿದ್ದ ಕೆ.ಎನ್.ರಾಜಣ್ಣ ಅವರನ್ನು ಅಂದು ಬಿಜೆಪಿಯಿಂದ ಸ್ಪರ್ಧಿಸಿದ್ದ ಜಿ.ಎಸ್.ಬಸವರಾಜು ಭೇಟಿ ಮಾಡಿ ಆ ‘ಫೋಟೋ’ವನ್ನು ವೈರಲ್ ಮಾಡಿತ್ತು. ಇದು ಜಿಎಸ್ಬಿಗೆ ಮಧುಗಿರಿ ಕ್ಷೇತ್ರದಲ್ಲಿ ದೊಡ್ಡ ಮುನ್ನಡೆ ದೊರಕಿಸಿಕೊಟ್ಟಿತ್ತಲ್ಲದೆ ಗೆಲುವಿಗೆ ಪ್ರಮುಖ ಕಾರಣವಾಗಿತ್ತು. ಅದೇ ದಾಳವನ್ನು ಇದೀಗ ಕಾಂಗ್ರೆಸ್ ಉರುಳಿಸಿದೆ. ಜೆಸಿಎಂ - ಎಸ್ಪಿಎಂ ಭೇಟಿ ಸೌಹಾರ್ದಯುತವಾದರು, ಇದು ಚುನಾವಣಾ ತಂತ್ರಗಾರಿಕೆ ಭಾಗವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net