

ಗದಗ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಪ್ರತ್ಯೇಕವಾಗಿ ಸುಸಜ್ಜಿತ ಸೌಲಭ್ಯಗಳುಳ್ಳ ಕೊಠಡಿಗಳನ್ನು ನಿರ್ವಿುಸಲಾಗಿದ್ದು ಆಯಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚುನಾವಣಾ ಮತಯಂತ್ರಗಳನ್ನು ಪ್ರತ್ಯೇಕವಾಗಿಡುವ ವ್ಯವಸ್ಥೆ ಮಾಡಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ.ಸಂಜೀವಕುಮಾರ ಹೇಳಿದರು.
ನಗರದ ಜಿಲ್ಲಾಡಳಿತ ಭವನದ ಆವರಣದಲ್ಲಿ 2.65 ಕೋಟಿ ರೂ. ವೆಚ್ಚದಲ್ಲಿ ನಿರ್ವಿುಸಿರುವ ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಇವಿಎಂಗಳನ್ನು ಅತ್ಯಂತ ಭದ್ರತೆಯಲ್ಲಿ ಇರಿಸುವುದು ಅಗತ್ಯವಾಗಿದ್ದು ಅದಕ್ಕಾಗಿ ಜಿಲ್ಲೆಯಲ್ಲಿ ಉತ್ತಮ ಸುಸಜ್ಜಿತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದೆ’ ಎಂದರು.
ಎಲ್ಲ ಜಿಲ್ಲೆಗಳಲ್ಲಿಯೂ ಕಟ್ಟಡ ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದ್ದು. ಈಗಾಗಲೇ ವಿವಿಧ ಜಿಲ್ಲೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯು ವಿವಿಧ ಹಂತಗಳಲ್ಲಿದೆ.
ಜಿಲ್ಲಾಧಿಕಾರಿ ಸುಂದರೇಶಬಾಬು ಮಾತನಾಡಿ, ವಿದ್ಯುನ್ಮಾನ ಮತಯಂತ್ರಗಳ ಉಗ್ರಾಣ ನಿರ್ವಣಕ್ಕೆ ಡಿಸೆಂಬರ್ 2018ರಲ್ಲಿ ಆಡಳಿತಾತ್ಮಕ ದೊರಕಿದ್ದು, ನಿರ್ವಿುತಿ ಕೇಂದ್ರದಿಂದ ಜನವರಿ 2019ರಲ್ಲಿ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸಲಾಯಿತು. ಜೂನ್ 2020ರ ವೇಳೆಗೆ ಕಟ್ಟಡ ಕಾಮಗಾರಿ ಮುಕ್ತಾಯಗೊಳಿಸಲಾಯಿತು. ಈ ಕಟ್ಟಡದಲ್ಲಿ ನಾಲ್ಕು ವಿಧಾನ ಸಭಾ ಕ್ಷೇತ್ರಗಳಿಗೆ ನಾಲ್ಕು ಪ್ರತ್ಯೇಕ ಕೊಠಡಿಗಳನ್ನು ನಿರ್ವಿುಸಲಾಗಿದ್ದು ಕೊಠಡಿಗಳಲ್ಲಿ ರ್ಯಾಕ್ ವ್ಯವಸ್ಥೆ ಮಾಡಲಾಗಿದೆ. ಅಗ್ನಿ ಅವಘಡ ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ. ಜತೆಗೆ ಕಟ್ಟಡಕ್ಕೆ ಸಿ.ಸಿ. ಟಿವಿ ಕಣ್ಗಾವಲಿನ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.
ರಾಜ್ಯ ಚುನಾವಣಾ ಆಯೋಗದ ಜಂಟಿ ಮುಖ್ಯ ಚುನಾವಣಾಧಿಕಾರಿ ರಾಘವೇಂದ್ರ, ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್, ಜಿಪಂ ಸಿಇಒ ಡಾ.ಆನಂದ ಕೆ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಸೀಲ್ದಾರ ಶ್ರೀನಿವಾಸಮೂರ್ತಿ, ನಿರ್ವಿುತಿ ಕೇಂದ್ರದ ಯೋಜನಾ ನಿರ್ದೇಶಕ ಜಿ.ವಿ.ಶಿರೋಳ ಉಪಸ್ಥಿತರಿದ್ದರು.
ಇವಿಎಂ ಮತ ಯಂತ್ರಗಳನ್ನು ಒಂದೆಡೆ ಸಂಗ್ರಹಿಸಿ ಸುರಕ್ಷಿತವಾಗಿಡುವುದರಿಂದ ಚುನಾವಣೆ ಪ್ರಕ್ರಿಯೆ ನಡೆಸಲು ನೆರವಾಗಲಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಈ ಕಟ್ಟಡದ ಸುರಕ್ಷೆ ಹಾಗೂ ಭದ್ರತೆ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿ ನಂತರ ಮತಯಂತ್ರಗಳನ್ನು ಪಾರದರ್ಶಕವಾಗಿ ಉಗ್ರಾಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತದೆ. | ಡಾ.ಸಂಜೀವಕುಮಾರ, ರಾಜ್ಯ ಮುಖ್ಯ ಚುನಾವಣಾಧಿಕಾರಿ