

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಮೋಪರಹಳ್ಳಿ ಗ್ರಾಮದಲ್ಲಿ ಶನಿವಾರ ನಿರ್ಮಿತಿ ಕೇಂದ್ರದ ಎಇಇ ಶಿವಕುಮಾರ್ ಎಂಬುವವರ ಮನೆಯಲ್ಲಿ ಇವಿಎಂ ಕಂಟ್ರೋಲ್ ಯೂನಿಟ್ ಅನುಮಾಸ್ಪದವಾಗಿ ಪತ್ತೆಯಾದ ಪ್ರಕರಣದ ಬೆನ್ನಲ್ಲೆ ಪ್ರಕರಣವನ್ನು ಬೇಧಿಸಲು ಜಿಲ್ಲಾಧಿಕಾರಿ ಎನ್. ಶಿವಶಂಕರ್ ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿಯನ್ನು ನೇಮಕ ಮಾಡಿದ್ದಾರೆ.
2018 ರ ವಿಧಾನಸಭಾ ಚುನಾವಣೆ ವೇಳೆ ತಾಂತ್ರಿಕ ಕಾರಣಕ್ಕೆ ಬಳಸಲಾಗದ ಇವಿಎಂ ಕಂಟ್ರೋಲ್ ಯೂನಿಟ್‌ಗಳನ್ನು ಅಧಿಕಾರಿ ಇಷ್ಟು ದಿನ ಮನೆಯಲ್ಲಿ ಇಟ್ಟುಕೊಂಡಿದ್ದ ಹಿಂದಿನ ರಹಸ್ಯವೇನು ಎಂಬುದರ ಬಗ್ಗೆ ಜಿಲ್ಲಾಡಳಿತ ತಲೆ ಕೆಡಿಸಿಕೊಂಡಿದ್ದು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಎಲ್ಲ ಆಯಾಮಗಳಿಂದ ತನಿಖೆ ನಡೆಸುವಂತೆ ಸೂಚನೆ ನೀಡಿದೆ.
ರಾಷ್ಟ್ರೀಯ ಹೆದ್ದಾರಿ ರಸ್ತೆ ಅಗಲೀಕರಣಕ್ಕಾಗಿ ಗ್ರಾಮದಲ್ಲಿನ ಎಇಇ ಮಾಲೀಕತ್ವದ ಮನೆ ಡೆಮಾಲಿಷನ್ ವೇಳೆ ಪತ್ತೆಯಾಗಿದ್ದು ಸ್ಥಳಕ್ಕೆ ತಹಸೀಲ್ದಾರ್‌ಮೋಹನ ಕುಮಾರಿ ಭೇಟಿ ನೀಡಿ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಬಗ್ಗೆ ಎಇಇ ಶಿವಕುಮಾರ್‌ಗೆ ನೋಟಿಸ್ ನೀಡಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗೆ ವರದಿ ನೀಡಿದ್ದಾರೆ. ಚುನಾವಣಾ ವಿಭಾಗದ ಅಧಿಕಾರಿಗಳೊಂದಿಗೆ ಸಭೆ ನಡೆಸಿರುವ ಜಿಲ್ಲಾಧಿಕಾರಿ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವ ಕುರಿತು ಭರವಸೆ ನೀಡಿದ್ದಾರೆ.
ಜಿಲ್ಲಾಡಳಿತ ಖಜಾನೆಗೆ ರವಾನೆ: ಇಂಜಿನಿಯರ್ ಮನೆಯಲ್ಲಿ ದೊರೆತ 7 ಇವಿಎಂ ಕಂಟ್ರೋಲ್ ಯೂನಿಟ್ ಯಂತ್ರಗಳನ್ನು ವಶಕ್ಕೆ ಪಡೆದಿರುವ ಜಿಲ್ಲಾಡಳಿತ ಅವುಗಳನ್ನು ಜಿಲ್ಲಾಡಳಿತದ ಖಜಾನೆಗೆ ರವಾನಿಸಿದೆ.
ಮನೆಯಲ್ಲಿ ಇಟ್ಟುಕೊಂಡಿದ್ಯಾಕೆ? ಪ್ರಾಥಮಿಕ ತನಿಖೆಯಲ್ಲಿ ಇಷ್ಟು ಯಂತ್ರಗಳು 2018ರ ವಿಧಾನಸಭಾ ಚುನಾವಣೆ ವೇಳೆ ತರಿಸಿದಂತ ಯಂತ್ರಗಳು ಎಂಬುದು ಗೊತ್ತಾಗಿದೆ. ಆದರೆ ತಾಂತ್ರಿಕ ದೋಷದ ಕಾರಣ ಇವುಗಳನ್ನು ಚುನಾವಣಾ ಪ್ರಕ್ರಿಯೆಯಲ್ಲಿ ಬಳಸಲಾಗಿಲ್ಲ ಎಂಬುದು ತಿಳಿದುಬಂದಿದೆ. ಆದರೆ ಇಷ್ಟು ವರ್ಷ ಕಾಲ ಅವುಗಳನ್ನು ಜಿಲ್ಲಾಡಳಿತ ವಶಕ್ಕೆ ನೀಡದೆ ಇಂಜಿನಿಯರ್ ಮನೆಯಲ್ಲಿ ಏಕೆ ಇಟ್ಟುಕೊಂಡಿದ್ದರು ಎಂಬುದು ಕುತೂಹಲ ಹುಟ್ಟುಹಾಕಿದೆ. ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಇಂಜಿನಿಯರ್ ಶಿವಕುಮಾರ್ ನಡೆ ನಿಗೂಡವಾಗಿದ್ದು ಪೂರ್ಣ ತನಿಖೆ ಬಳಿಕ ವಾಸ್ತವ ಬಯಲಿಗೆ ಬರಲಿದೆ.
ಏನಿದು ಪ್ರಕರಣ? ರಸ್ತೆ ಅಗಲೀಕರಣಕ್ಕಾಗಿ ದೊಡ್ಡಬಳ್ಳಾಪುರ ತಾಲೂಕು ಕಸಬಾ ಹೋಬಳಿ ಮೋಪರಹಳ್ಳಿ ಗ್ರಾಮದಲ್ಲಿ ಕಟ್ಟಡಗಳ ನೆಲಸಮ ಮಾಡುವ ವೇಳೆ ನಿರ್ಮಿತಿ ಕೇಂದ್ರದಲ್ಲಿ ಗುತ್ತಿಗೆ ಆಧಾರದಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಶಿವಕುಮಾರ್ ಮನೆಯಲ್ಲಿ 7 ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆಯಾಗಿದ್ದವು. ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ದೊಡಬಳ್ಳಾಪುರ ತಹಸೀಲ್ದಾರ್ ಮೋಹನ್ ಕುಮಾರಿ ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ ಇವಿಎಂ ಯೂನಿಟ್ ಯಂತ್ರಗಳನ್ನು ವಶಕ್ಕೆ ಪಡೆದಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿ ಸಂಬಂಧಪಟ್ಟ ಇಂಜಿನಿಯರ್‌ಗೆ ಕಾರಣ ಕೇಳಿ ನೋಟಿಸ್ ಜಾರಿಗೊಳಿಸಲಾಗಿತ್ತು.
--
ದೊಡ್ಡಬಳ್ಳಾಪುರದಲ್ಲಿ ಇವಿಎಂ ಕಂಟ್ರೋಲ್ ಯೂನಿಟ್‌ಗಳು ಪತ್ತೆಯಾದ ಪ್ರಕರಣದ ತನಿಖೆಗಾಗಿ ಉಪವಿಭಾಗಾಧಿಕಾರಿಯನ್ನು ನೇಮಿಸಲಾಗಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತ ಸೂಚನೆ ನೀಡಲಾಗಿದೆ. ಈಗಾಗಲೇ ಪ್ರಕರಣ ಸಂಬಂಧ ಇಂಜಿನಿಯರ್‌ಗೆ ನೋಟಿಸ್ ನೀಡಿದ್ದು ಮುಂದಿನ ಕ್ರಮ ಜರುಗಿಸಲಾಗುವುದು. ಈ ಯಂತ್ರಗಳು ತಾಂತ್ರಿಕ ದೋಷದ ಕಾರಣ 2018 ರ ವಿಧಾನಸಭಾ ಚುನಾವಣೆ ವೇಳೆ ಬಳಸಲಾಗಿರಲಿಲ್ಲ ಎಂಬುದು ಕಂಡುಬಂದಿದೆ.
ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಬೆಂ.ಗ್ರಾಮಾಂತರ