

ಯಲಬುರ್ಗಾ: ನನಗೆ ರೊಕ್ಕ-ರೂಪಾಯಿ ಬೇಡ ದುಶ್ಚಟಗಳ ಭಿಕ್ಷೆ ಹಾಕಿ ಎಂದು ಕುಷ್ಟಗಿ ತಾಲೂಕಿನ ನಿಡಶೇಸಿ ಹಿರೇಮಠದ ಕಿರಿಯ ಮಠಾಧೀಶ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಮಾಟಲದಿನ್ನಿ ಗ್ರಾಮದಲ್ಲಿ ಹಮ್ಮಿಕೊಂಡ ಐದು ದಿನಗಳ ಸದ್ಭಾವನಾ ಯಾತ್ರೆ ಹಾಗೂ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಜನರು ದುಶ್ಚಟಗಳಿಗೆ ಬಲಿಯಾಗಿ ಅಮೂಲ್ಯ ಜೀವವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳು ಮನುಷ್ಯನನ್ನು ಸಾಮಾಜಿಕ ಕಳಂಕಕ್ಕೆ ಗುರಿ ಮಾಡುತ್ತವೆ. ಇದರಿಂದ ನಾಗರಿಕ ಸಮಾಜ ಹಾದಿ ತಪ್ಪುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಕುಡಿತ, ತಂಬಾಕು ಸೇವನೆಯಿಂದ ಆರೋಗ್ಯ ಹದಗೆಡುವುದಲ್ಲದೇ ಕೌಟುಂಬಿಕ ಕಲಹ ಹೆಚ್ಚುತ್ತಿವೆ. ದುಶ್ಚಟಗಳ ಮುಕ್ತ ಗ್ರಾಮವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸಬೇಕು ಎಂದರು.
ಆಧ್ಯಾತ್ಮಿಕ ಪುರಾಣ ಪ್ರವಚನಗಳು ಪ್ರತಿಯೊಬ್ಬರ ಜೀವನಕ್ಕೂ ಬೆಳಕು ನೀಡಬಲ್ಲವು. ಪ್ರವಚನದಿಂದ ಸನ್ಮಾರ್ಗ ಸಾಧ್ಯ. ಮಾನಸಿಕ ನೆಮ್ಮದಿಗೆ ಪ್ರವಚನ ಔಷಧವಾಗವಲ್ಲದು ಎಂದರು.
ದುಮ್ಮವಾಡದ ಶ್ರೀ ಸರ್ಪಭೂಷಣ ದೇವರು ಸಾನಿಧ್ಯ ವಹಿಸಿದ್ದರು. ಪ್ರಮುಖರಾದ ಹುಲಗಪ್ಪ ಜೀರಾಳ, ದೊಡ್ಡಪ್ಪ ಬೇವೂರು, ಮುತ್ತಣ್ಣ ಬಡಿಗೇರ, ಹುಸೇನ ಸಾಬ್ ಹಾಳಕೇರಿ, ಖಾಜಾಸಾಬ ಶಕ್ಕೇರ್, ದಾನಪ್ಪ ಬೇವೂರು, ರಾಮಲಿಂಗಪ್ಪ ಕೋರಿ, ಮೈಲಾರಪ್ಪ ಹುಣಸಿಹಾಳ, ಶಂಕ್ರಪ್ಪ ಹಳ್ಳಿ, ದಾನಪ್ಪ ಕಲ್ಭಾವಿ, ಈಶಪ್ಪ ಹಂಚಿನಾಳ ಇತರರಿದ್ದರು.