

ಹರಪನಹಳ್ಳಿ: ಭಗವಂತ ಪ್ರತಿ ಕಾರ್ಯದಲ್ಲೂ ಜನರಿಗೆ ಸಹಕಾರಿಯಾಗುತ್ತಾನೆ ಎಂದು ಕಾಗಿನೆಲೆ ಕನಕ ಗುರುಪೀಠದ ಪೀಠಾಧಿಪತಿ ನಿರಂಜನಾನಂದಪುರಿ ಸ್ವಾಮೀಜಿ ತಿಳಿಸಿದರು.
ತಾಲೂಕಿನ ಹುಲಿಕಟ್ಟಿ ಗ್ರಾಮದಲ್ಲಿ ಶುಕ್ರವಾರ ಬೀರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಉದ್ಘಾಟನೆ, ಮೂರ್ತಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಅನಿಷ್ಟ ಪದ್ಧತಿಗಳನ್ನು ಆಚರಣೆ ಮಾಡದಿರಿ. ಮಕ್ಕಳಿಗೆ ಶಿಕ್ಷಣ ನೀಡಿದಾಗ ಸಾಮಾಜಿಕ, ಆರ್ಥಿಕವಾಗಿ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ಪ್ರತಿಮೆಯಲ್ಲಿ ಹೆಸರು ಬೇಡ, ಓದುವ ಪುಸ್ತಕದಲ್ಲಿ ಇರಲಿ. ಆಗ ತಳ ಸಮುದಾಯಗಳ ಅಭಿವೃದ್ಧಿ ಸಾಧ್ಯವೆಂದು ಅಂಬೇಡ್ಕರ್ ಸಮಾಜಕ್ಕ ಉತ್ತಮವಾದ ಸಂದೇಶ ನೀಡಿದ್ದಾರೆ. ಸಮಾಜ ಜಾಗೃತಿ ಹೊಂದಲು ದೇವಾಲಯಗಳಲ್ಲಿನ ಗಂಟೆ ಸದ್ದಿನ ಹೊರತಾಗಿ ಸರ್ಕಾರಿ ಶಾಲೆಗಳ ಗಂಟೆಯ ನಾದ ಮಕ್ಕಳಲ್ಲಿ ಮೊಳಗಬೇಕು ಎಂದು ಶ್ರೀಗಳು ತಿಳಿಸಿದರು.
ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ್ ಮಾತನಾಡಿ, ಹಿಂದು ಧರ್ಮದ ಯಾವುದೇ ಶುಭ ಕಾರ್ಯಗಳು ಪೂರ್ಣಗೊಳ್ಳಲು ಕುರುಬ ಸಮಾಜದ ಕಂಬಳಿ ಅಗತ್ಯ. ಆದ್ದರಿಂದ ಹಾಲುಮತ ಸಮುದಾಯದವರು ತಿಳಿ ಹಾಲಿನಷ್ಟೇ ಶ್ರೇಷ್ಠರು. ಕುರುಬರು ಕುರಿ ಕಾಯಲು ಸೀಮಿತವಾಗಿಲ್ಲ. ಸಮಾಜದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ದಾಸ ಶ್ರೇಷ್ಠರಾದ ಕನಕದಾಸರು ವಚನ ಸಾಹಿತ್ಯ ಮೂಲಕ ಸಮಸಮಾಜ ಕಟ್ಟುವಲ್ಲಿ ಮುಖ್ಯ ಪಾತ್ರವಹಿಸಿದ್ದಾರೆ ಎಂದರು.
ಪಿಎಲ್‌ಡಿ ಬ್ಯಾಂಕ್ ಸದಸ್ಯ ಮುತಿಗಿ ಜಂಬಣ್ಣ, ಪ್ರಮುಖರಾದ ವೈ.ಕೆ.ಬಿ ದುರುಗಪ್ಪ, ಭರತೇಶ್ ಕಲ್ಲೇರ ಬಸವರಾಜ್, ಸಿದ್ದಣ್ಣ, ಬಳಿಗನೂರು ಕೊಟ್ರೇಶ್, ಇಮಾಂ ಸಾಹೇಬ್, ಫಕ್ಕೀರಪ್ಪ, ದೇವಪ್ಪ, ಬಣಕಾರ್ ಗಂಗಾಧರ, ಕೊಟ್ರಪ್ಪ, ದುರುಗಪ್ಪ , ಉತ್ತಂಗಿ ಸಂಗಮೇಶ್ ಗವಾಯಿ, ಅಶೋಕ, ಹನುಮಂತ, ಪ್ರವೀಣ್ ಕುಮಾರ್ ಇತರರಿದ್ದರು.