

ಬಳ್ಳಾರಿ: ನಗರ ಸೇರಿ ಜಿಲ್ಲಾದ್ಯಂತ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬವನ್ನು ಮಹಿಳೆಯರು ಸಂಭ್ರಮದಿಂದ ಆಚರಿಸಿದರು.
ವರಮಹಾಲಕ್ಷ್ಮಿಯನ್ನು ಪೂಜಿಸಿದರೆ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಅಷ್ಟೈಶ್ವರ್ಯ ಲಭಿಸುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಹೀಗಾಗಿ ನಗರ ಸೇರಿ ಜಿಲ್ಲಾದ್ಯಂತ ಮನೆಗಳಲ್ಲಿ ಹಬ್ಬದ ವಾತಾವರಣ ಕಂಡು ಬಂತು.
ಬಾಳೆ ದಿಂಡು, ಮಾವಿನ ಎಲೆ, ಕಬ್ಬಿನ ಪೈರುಗಳ ತೋರಣಗಳಿಂದ ಮನೆಗಳನ್ನು ಅಲಂಕರಿಸಲಾಗಿತ್ತು. ಮನೆ ಮುಂಭಾಗದಲ್ಲಿ ಬಿಡಿಸಿದ ಬಣ್ಣ ಬಣ್ಣದ ರಂಗೋಲಿಗಳು ಹಬ್ಬದ ಕಳೆಯನ್ನು ಹೆಚ್ಚಿಸಿತ್ತು. ಹೊಸ ಸೀರೆಯಲ್ಲಿ ಕಂಗೊಳಿಸುತ್ತಿದ್ದ ಮಹಿಳೆಯರು ಉಪವಾಸ ವ್ರತ ಆಚರಿಸಿದರು.
ವರಮಹಾಲಕ್ಷ್ಮೀ ದೇವಿ ಮೂರ್ತಿ ಸ್ಥಾಪಿಸಿ, ಹೂವು, ಚಿನ್ನಾಭರಣಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಿದರು. ಹೊಸ ಬಟ್ಟೆ ಧರಿಸಿ ಮಿಂಚುತ್ತಿದ್ದ ಹೆಣ್ಣುಮಕ್ಕಳು, ಮಕ್ಕಳು ಪೂಜೆಯಲ್ಲಿ ಪಾಲ್ಗೊಂಡರು. ಮನೆಗಳಲ್ಲಿ ಒಬ್ಬಟ್ಟು, ಚಕ್ಕುಲಿ, ಕೋಡುಬಳೆ, ಕರ್ಜಿಕಾಯಿ, ಪಾಯಸ ಸೇರಿ ವಿವಿಧ ಭಕ್ಷೃಗಳನ್ನು ತಯಾರಿಸಿ ದೇವಿಗೆ ನೈವೇದ್ಯ ಸಮರ್ಪಿಸಲಾಯಿತು.
ಮುತ್ತೈದೆಯರನ್ನು ಮನೆಗೆ ಕರೆಸಿ ಅರಿಷಿಣ ಕುಂಕುಮ ನೀಡಿ ಉಡಿ ತುಂಬಲಾಯಿತು. ನೆಂಟರು, ಸ್ನೇಹಿತರನ್ನು ಆಹ್ವಾನಿಸಿ ಹಬ್ಬದೂಟ ಬಡಿಸಿದರು.
ದೇವಾಲಯಗಳಲ್ಲಿ ವಿಶೇಷ ಪೂಜೆ: ಹಬ್ಬದ ಅಂಗವಾಗಿ ನಗರದ ಕನಕ ದುರ್ಗಮ್ಮ ದೇವಿ, ಸಣ್ಣ ದುರ್ಗಮ್ಮ , ಲಕ್ಷ್ಮಿ ದೇವಿ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನೆರವೇರಿದವು. ದೇವತೆಗಳ ಮೂರ್ತಿಗಳಿಗೆ ವಿಶೇಷ ಆಲಂಕಾರ ಮಾಡಲಾಗಿತ್ತು.
ಭಕ್ತರು ಕುಟುಂಬ ಸಮೇತರಾಗಿ ದೇವಾಲಯಗಳಿಗೆ ತೆರಳಿ ದರ್ಶನ ಪಡೆದರು. ಹಲವು ದೇವಾಲಯಗಳು ವಿದ್ಯುತ್ ದೀಪಾಲಂಕರದಿಂದ ಕಂಗೊಳಿಸಿದವು. ಮಾರುಕಟ್ಟೆಯಲ್ಲಿ ಹಬ್ಬಕ್ಕೆ ಬೇಕಾಗಿರುವ ವಸ್ತುಗಳ ಖರೀದಿ ಜೋರಾಗಿತ್ತು. ಇಲ್ಲಿನ ಹೂವಿನ, ಹಣ್ಣಿನ ಮಾರುಕಟ್ಟೆ ಸೇರಿ ಪ್ರಮುಖ ಬೀದಿಗಳಲ್ಲಿ ಜನ ಜಂಗುಳಿ ಹೆಚ್ಚಾಗಿ ಕಂಡು ಬಂತು.