

ಚಿಕ್ಕಬಳ್ಳಾಪುರ: ಕಳೆದ ಕೆಲ ದಿನಗಳಿಂದಲೂ ನಿರಂತರವಾಗಿ ಮೋಡ ಮುಸುಕಿದ ವಾತಾವರಣ, ದಟ್ಟವಾದ ಮಂಜು ಮತ್ತು ತಣ್ಣನೆಯ ಜೋರು ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಜನರು ಚಳಿಗೆ ನಡುಗುವಂತಾಗಿದೆ.
ಹೌದು! ಫೆಂಗಲ್ ಚಂಡಮಾರುತದಿಂದ ಉಂಟಾಗಿರುವ ಹವಾಮಾನ ವೈಪರೀತ್ಯದ ಪ್ರಭಾವವು ಜಿಲ್ಲೆಯ ಮೇಲೂ ಬಿದ್ದಿದ್ದು ಬೆಚ್ಚಗೆ ಇರಲು ಹೆಚ್ಚಿನ ಜನರು ಟೋಪಿ, ಸ್ವೆಟರ್, ಜರ್ಕಿನ್‌ಗಳ ಮೊರೆ ಹೋಗಿದ್ದಾರೆ.
ಬಂಗಾಲಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ವಿವಿಧೆಡೆ ಮಳೆ ಸುರಿಯುತ್ತಿದ್ದರೆ, ಬಹುತೇಕ ಕಡೆ ಮೋಡ ಮುಸುಕಿದ ವಾತಾವರಣ ಕಂಡು ಬರುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸುತ್ತಿದೆ. ಇದರ ನಡುವೆ ಬೆಳಿಗ್ಗೆ ಮತ್ತು ಸಂಜೆ ದಟ್ಟವಾದ ಮಂಜು ಆವರಿಸುತ್ತಿದ್ದು . ಮತ್ತೊಂದೆಡೆ ಬದಲಾದ ವಾತಾವರಣದಿಂದ ಜನರು ಹೊರಗೆ ಬರಲು ಹೆದುರುವಂತಾಗಿದೆ. ಚಳಿಗೆ ನೆಗಡಿ, ತಲೆ ನೋವು, ಕೈ ಕಾಲು ನೋವು, ಕೆಮ್ಮು, ಕಣ್ಣು ಉರಿ ಸೇರಿ ಶೀತದ ನಾನಾ ಸಮಸ್ಯೆಗಳು ಕಾಡುತ್ತಿವೆ. ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳುವ ರೋಗಿಗಳ ಸಂಖ್ಯೆ, ಔಷಧಗಳನ್ನು ಸೇವಿಸುವುದರ ಪ್ರಮಾಣ ಹೆಚ್ಚಾಗಿದೆ.
*ಬೆಚ್ಚಗಿರಲು ನಾನಾ ಕಸರತ್ತು
ಈಗಾಗಲೇ ಸ್ವೆಟರ್, ಟೋಪಿ, ಜರ್ಕಿನ್ ಸೇರಿದಂತೆ ಬೆಚ್ಚಗಿಡುವ ಬಟ್ಟೆಗಳ ಭರ್ಜರಿ ವಹಿವಾಟು ನಡೆಯುತ್ತಿದ್ದು ಪ್ರಮುಖ ರಸ್ತೆಗಳ ಬದಿಯಲ್ಲಿ ಬೇಡಿಕೆ ಹೆಚ್ಚಳಕ್ಕೆ ಅನುಗುಣವಾಗಿ ದುಬಾರಿ ದರಕ್ಕೆ ಉತ್ಪನ್ನಗಳನ್ನು ಮಾರುತ್ತಿರುವ ದೃಶ್ಯ ಕಂಡು ಬರುತ್ತಿದೆ. ಮತ್ತೆ ಫ್ಯಾಷನ್ ಶೈಲಿಗೆ ಹೊಂದಿಕೊಂಡಿರುವ ಅನೇಕರು ಆಯ್ಕೆಯ ಬಣ್ಣ, ಬ್ರಾö್ಯಂಡ್, ಗುಣಮಟ್ಟವನ್ನಾಧಾರಿಸಿ ಆನ್ ಲೈನ್‌ನಲ್ಲಿ ಖರೀದಿಸುತ್ತಿದ್ದಾರೆ.
*ಬಿಸಿ ಬಿಸಿ ಪದಾರ್ಥಗಳ ಒಲವು
ಚಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ತಂಪು ಪಾನೀಯಾಗಳ ಕಡೆ ಒಲವು ತುಂಬಾ ಕಡಿಮೆಯಾಗಿದೆ. ಬಹುತೇಕರು ಕಾಫಿ ಚಹಾ, ಬೋಂಡಾ, ಬಜ್ಜಿ, ಪಕೋಡಾ ಸೇರಿದಂತೆ ಬಿಸಿ ಬಿಸಿ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ. ಮುಂಜಾವದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ಪ್ರಮುಖ ವೃತ್ತಗಳಲ್ಲಿ ಬೆಂಕಿ ಹೊತ್ತಿಸಿ, ಚಳಿ ಕಾಯಿಸಿಕೊಳ್ಳುವಂತಹುದು ಕಂಡು ಬರುತ್ತಿದೆ.