ವಿಘ್ನೇಶ್ವರ ಸ್ಪಾರ್ಕಲ್ಸ್ ಫ್ಯಾಕ್ಟರಿಯಲ್ಲಿ ಎಲ್ಲವೂ ಅನಧಿಕೃತ

SPARKAL CANDAL PACTIRY
Published on

ರಾಣೆಬೆನ್ನೂರ: ಇಲ್ಲಿಯ ಮಾರುತಿ ನಗರದ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರಕ್ಕೆ ಬೆಂಕಿ ಬಿದ್ದ ಪ್ರಕರಣದಲ್ಲಿ ಇಲ್ಲಿಯ ನಗರಸಭೆ ಹಾಗೂ ಪರಿಸರ ನಿಯಂತ್ರಣ ಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯನ ಎದ್ದು ಕಾಣುತ್ತಿದೆ.

ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದವರು ನಗರಸಭೆ, ಪರಿಸರ ನಿಯಂತ್ರಣ ಮಂಡಳಿ ಸೇರಿ ಇತರ ಯಾವುದೇ ಪ್ರಾಧಿಕಾರದ ಪರವಾನಗಿ ಪಡೆಯದೆ ಇರುವುದು ಅಚ್ಚರಿ ಮೂಡಿಸುತ್ತದೆ. ಅನಧಿಕೃತವಾಗಿ ಉದ್ಯಮ ನಡೆಸುತ್ತಿದ್ದರು ಎಂದು ನಗರಸಭೆ ಆಯುಕ್ತ ನಿಂಗಪ್ಪ ಕುಮ್ಮಣ್ಣನವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಅನುಮತಿ ಪಡೆಯದಿರುವುದಲ್ಲದೆ, ಜನವಸತಿ ಪ್ರದೇಶದಲ್ಲಿ ಅನಧಿಕೃತವಾಗಿ ಸಿಡಿಮದ್ದು ತಂದು ಸ್ಪಾರ್ಕ್ ಕ್ಯಾಂಡಲ್​ಗಳನ್ನು ತಯಾರಿಸುತ್ತಿದ್ದರು. ಇವರ ಬಳಿ 25ಕ್ಕೂ ಅಧಿಕ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ತಾವು ತಯಾರಿಸಿದ ಸ್ಪಾರ್ಕ್ ಕ್ಯಾಂಡಲ್​ಗಳನ್ನು ಸ್ಥಳೀಯ ಬೇಕರಿ ಸೇರಿ ಇತರೆಡೆ ಮಾರಾಟ ಮಾಡುತ್ತಿದ್ದರು.

ಇಷ್ಟೆಲ್ಲ ಇದ್ದರೂ ನಗರಸಭೆ ಅಧಿಕಾರಿಗಳ ಗಮನಕ್ಕೆ ಏಕೆ ಬರಲಿಲ್ಲ? ನಿತ್ಯವೂ ಕಂದಾಯ ತುಂಬುವುದು, ಅಂಗಡಿಗಳ ಪರವಾನಗಿ ನವೀಕರಣ ಸೇರಿ ಇತರ ಕೆಲಸಗಳಿಗಾಗಿ ವಾಣಿಜ್ಯ ಮಳಿಗೆಗಳನ್ನು ಸುತ್ತುವ ನಗರಸಭೆ ಅಧಿಕಾರಿಗಳಿಗೆ ಅನಧಿಕೃತ ಸ್ಪಾರ್ಕ್ ಕ್ಯಾಂಡಲ್ ತಯಾರಿಸುವ ಕೇಂದ್ರ ಏಕೆ ಕಾಣಿಸಲಿಲ್ಲ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.

ಸ್ಪಾರ್ಕ್ ಕ್ಯಾಂಡಲ್ ತಯಾರಿಸುವವರು ಮುಖ್ಯವಾಗಿ ಬೆಂಕಿ ಅವಘಡಗಳನ್ನು ಎದುರಿಸಲು ತುರ್ತು ವ್ಯವಸ್ಥೆ ಮಾಡಿಕೊಟ್ಟುಕೊಂಡಿರಬೇಕು. ಆದರೆ, ವಿಘ್ನೇಶ್ವರ ಸ್ಪಾರ್ಕಲ್ಸ್​ದವರು ಯಾವುದೇ ಸುರಕ್ಷತಾ ಕ್ರಮ ಕೈಗೊಂಡಿರಲಿಲ್ಲ ಎಂದು ಅಗ್ನಿಶಾಮಕ ದಳದ ಠಾಣಾಧಿಕಾರಿ ಎಸ್.ಎಸ್. ಶಿವಳ್ಳಿ ತಿಳಿಸಿದ್ದಾರೆ.

ಸ್ಥಳೀಯ ಶಾಸಕ ಪ್ರಕಾಶ ಕೋಳಿವಾಡ, ಜಿಲ್ಲಾಧಿಕಾರಿ ರಘನಂದನ ಮೂರ್ತಿ ಕೂಡಲೇ ಇದಕ್ಕೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಜತೆಗೆ ನಿರ್ಲಕ್ಷ್ಯನ ತೋರಿದ ನಗರಸಭೆ ಅಧಿಕಾರಿಗಳನ್ನು ಅಮಾನತು ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಗಂಭೀರ ಸ್ಥಿತಿಯಲ್ಲಿ ಕಾರ್ವಿುಕರು

ಘಟನೆಯಲ್ಲಿ ಗಾಯಗೊಂಡ 7 ಕಾರ್ವಿುಕರಲ್ಲಿ ಓರ್ವ ಈಗಾಗಲೇ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ. ಮಂಗಳಾ ಹಾಗೂ ಶಿಲ್ಪಾ ಎಂಬುವವರ ಸ್ಥಿತಿ ಗಂಭೀರವಾಗಿರುವ ಕಾರಣ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದವರು ದಾವಣಗೆರೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಣ್ಣಿಮೆ ಉಳಿಸಿತು ಜೀವ

ಸ್ಪಾರ್ಕ್ ಕ್ಯಾಂಡಲ್ ತಯಾರಿಸುವ ಕೇಂದ್ರದಲ್ಲಿ ನಿತ್ಯ 25ಕ್ಕೂ ಅಧಿಕ ಕಾರ್ವಿುಕರು ಕೆಲಸ ಮಾಡುತ್ತಿದ್ದರು. ಆದರೆ, ಆ. 1ರಂದು ಹುಣ್ಣಿಮೆ ಇದ್ದ ಕಾರಣ 7 ಜನರನ್ನು ಹೊರತುಪಡಿಸಿ ಉಳಿದವರು ರಜೆ ಮಾಡಿದ್ದರು. ಬೆಂಕಿ ಅವಘಡ ವಿಷಯ ತಿಳಿದ ಕಾರ್ವಿುಕರು ಹುಣ್ಣಿಮೆ ಜೀವ ಉಳಿಸಿತು ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಬೇಕರಿಗಳಿಗೆ ನೋಟಿಸ್ ಜಾರಿ

ಪ್ರಕರಣದ ಕುರಿತು ತನಿಖೆ ಕೈಗೊಂಡಿರುವ ಪೊಲೀಸರು ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದವರಿಂದ ಯಾರ್ಯಾರು ಸ್ಪಾರ್ಕ್ ಕ್ಯಾಂಡಲ್ ಖರೀದಿಸುತ್ತಿದ್ದರು, ಜತೆಗೆ ಇವರ ಸಮಗ್ರ ಮಾಹಿತಿ ಕಲೆಹಾಕಲು ಪೊಲೀಸರು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಒಂದು ಉಪಕ್ರಮವಾಗಿ ನಗರದ ಎಲ್ಲ ಬೇಕರಿಗಳಿಗೆ ಗುರುವಾರ ನೋಟಿಸ್ ಜಾರಿ ಮಾಡಲಾಗಿದೆ ಎಂದು ಶಹರ ಠಾಣೆ ಪಿಎಸ್​ಐ ಗಡ್ಡೆಪ್ಪ ಗುಂಜುಟಗಿ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ವಿಘ್ನೇಶ್ವರ ಸ್ಪಾರ್ಕಲ್ಸ್ ಮತ್ತು ಪಾರ್ಟಿ ಪೂಪರ್ ಕೇಂದ್ರದವರು ನಗರಸಭೆ, ಪರಿಸರ ನಿಯಂತ್ರಣ ಮಂಡಳಿ ಸೇರಿ ಯಾವ ಪ್ರಾಧಿಕಾರದಿಂದಲೂ ಪರವಾನಗಿ ಪಡೆಯದೆ ಅನಧಿಕೃತವಾಗಿ ನಡೆಸುತ್ತಿದ್ದರು. ಅವರು ಬಾಡಿಗೆ ಪಡೆದಿರುವ ಕಟ್ಟಡಕ್ಕೂ ಜಿ ಪ್ಲಸ್-1 ಮನೆ ನಿರ್ವಣಕ್ಕೆ ಮಾತ್ರ ಪರವಾನಗಿ ಇದೆ. 2ನೇ ಮಹಡಿ ನಿರ್ವಣಕ್ಕೆ ಪರವಾನಗಿ ಇಲ್ಲ. ಇದು ಕೂಡ ಅನಧಿಕೃತವಾಗಿದೆ. | ನಿಂಗಪ್ಪ ಕುಮ್ಮಣ್ಣನವರ, ನಗರಸಭೆ ಆಯುಕ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net